ಅಹ್ಮದಾಬಾದ್: ವಿಶ್ವದ ದೊಡ್ಣಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರವಾಸ ಕೈಗೊಂಡಿದ್ದು, ಇಡೀ ವಿಶ್ವದ ಕಣ್ಣು ಇದೀಗ ಭಾರತದ ಮೇಲೆ ನೆಟ್ಟಿದೆ.
ಉಭಯ ದೇಶಗಳ ನಡುವೆ ಯಾವೆಲ್ಲ ಒಪ್ಪಂದಗಳು ನಡೆಯಲಿವೆ ಎಂಬುದು ವಿಶ್ವದ ಕಾತುರಕ್ಕೆ ಕಾರಣವಾಗಿದ್ದು, ಇದರ ಮಧ್ಯೆ ಗುಜರಾತ್ನ ಮೊಟೆರಾ ಕ್ರಿಕೆಟ್ ಮೈದಾನದಲ್ಲಿ ನಡೆದ 'ನಮಸ್ತೆ ಟ್ರಂಪ್' ವೇಳೆ ಅಮೆರಿಕ ಅಧ್ಯಕ್ಷ ಮಹತ್ವದ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ.
ಭಾಷಣದ ವೇಳೆ ಮಾತನಾಡಿದ ಟ್ರಂಪ್, ನಾಳೆ ಉಭಯ ದೇಶಗಳ ನಡುವೆ ಹೆಲಿಕಾಪ್ಟರ್ ಸೇರಿದಂತೆ ರಕ್ಷಣಾ ವಲಯದಲ್ಲಿ ಬರೋಬ್ಬರಿ $3 ಬಿಲಿಯನ್ ಒಪ್ಪಂದ ಏರ್ಪಡಲಿದೆ ಎಂದು ತಿಳಿಸಿದ್ದಾರೆ. ಈ ಹಿಂದಿನಿಂದಲೂ ಉಭಯ ದೇಶಗಳ ನಡುವೆ ರಕ್ಷಣಾ ವಲಯದಲ್ಲಿ ಮಹತ್ವದ ಒಪ್ಪಂದಗಳು ನಡೆಯುತ್ತಿದ್ದು, ಇದೀಗ ಮತ್ತೊಂದು ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಲಿವೆ.
ಇದಲ್ಲದೇ 24 MH-60R ಸಿಕೋರ್‌ಸ್ಕಿ ಹೆಲಿಕಾಪ್ಟರ್ಗಾಗಿ 42.4 ಬಿಲಿಯನ್, ಅಪಾಚೆ ಎಹೆಚ್ -64 ಇ ಅಟ್ಯಾಕ್ ಹೆಲಿಕಾಪ್ಟರ್ ಒಪ್ಪಂದ ಸಹ ನಡೆಯಲಿದೆ. ಕಳೆದ ವಾರದ ನಡೆದ ಕ್ಯಾಬಿನೆಟ್ನಲ್ಲಿ ಈ ಒಪ್ಪಂದಕ್ಕೆ ಅಂಗೀಕಾರ ಸಿಕ್ಕಿದೆ.
ಇದರ ಮಧ್ಯೆ ಉಗ್ರ ಸಂಘಟನೆಗಳ ವಿರುದ್ಧ ಭಾರತ-ಅಮೆರಿಕ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಅವು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದು ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ.