ಬಾಲಸೋರ್ : ಆತ್ಮನಿರ್ಭರ ಭಾರತದ ಮಹತ್ತರ ಮೈಲಿಗಲ್ಲು ಎಂಬಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದ ದೇಶೀ ನಿರ್ಮಿತ ಸುಧಾರಿತ ಶ್ರೇಣಿಯ 'ಶೌರ್ಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಏನಿದರ ವಿಶೇಷತೆ?
ಒಡಿಶಾ ಬಾಲಸೋರ್ ತೀರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ಭಾರತೀಯ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಶೌರ್ಯ ಹೆಸರಿನ ಕ್ಷಿಪಣಿಯು ನಿಗದಿತ ಗುರಿ ತಲುಪಿದೆ. ಸುಮಾರು 800 ಕಿ.ಮೀ. ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಇದು ನೆಲದಿಂದ ನೆಲಕ್ಕೆ ಪ್ರಯೋಗಿಸುವ ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಆಗಿದೆ. ಕಡಿಮೆ ತೂಕವುಳ್ಳ ಈ ಕ್ಷಿಪಣಿಯ ಕಾರ್ಯಾಚರಣೆ ಬಹಳ ಸುಲಭವಾಗಿರುವುದು ಸುಧಾರಿತ ಶೌರ್ಯ ಕ್ಷಿಪಣಿಯ ಮತ್ತೊಂದು ವಿಶೇಷತೆಯಾಗಿದೆ.
ಸೆ.24 ರಂದು 350 ಕಿ.ಮೀ. ದೂರಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿರುವ ಪೃಥ್ವಿ-2 ಕ್ಷಿಪಣಿ ಹಾಗೂ ಸೆ.30 ರಂದು 400 ಕಿ.ಮೀ.ಗೂ ಮೀರಿದ ಗುರಿ ತಲುಪಬಲ್ಲ ಬ್ರಹ್ಮೋಸ್ ಸೂಪರ್ಸೋನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಸಹ ಯಶಸ್ವಿಯಾಗಿತ್ತು. ಈ ಮೂಲಕ ಭಾರತೀಯ ಸೇನಾ ಪಡೆಗೆ ಮತ್ತಷ್ಟು ಬಲ ಬಂದಿದೆ.