ನವದೆಹಲಿ: ಯುದ್ಧ ಟ್ಯಾಂಕ್ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವಿರುವ ದೇಶೀ ನಿರ್ಮಿತ ಶಕ್ತಿಶಾಲಿ 'ನಾಗ್' ಹೆಸರಿನ ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.
ಆತ್ಮನಿರ್ಭರ ಭಾರತದ ಮಹತ್ತರ ಮೈಲಿಗಲ್ಲು ಎಂಬಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದ ದೇಶೀ ನಿರ್ಮಿತ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಭಾರತ, ಇದೀಗ ನಾಗ್ ಕ್ಷಿಪಣಿಯ ಕೊನೆಯ ಹಂತದ ಪರೀಕ್ಷೆಯನ್ನೂ ಯಶಸ್ವಿಯಾಗಿಸಿದೆ.
"ಭಾರತ ಇಂದು ಡಿಆರ್‌ಡಿಒ-ಅಭಿವೃದ್ಧಿಪಡಿಸಿದ ನಾಗ್ ಕ್ಷಿಪಣಿಯ ಪರೀಕ್ಷೆಯನ್ನು ಇಂದು ಬೆಳಗ್ಗೆ 6: 45ಕ್ಕೆ ರಾಜಸ್ಥಾನದ ಪೋಖ್ರಾನ್ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿದೆ" ಎಂದು ಡಿಆರ್‌ಡಿಒ ಅಧಿಕಾರಿಗಳು ಹೇಳಿದ್ದಾರೆ.
ನಾಗ್ ಕ್ಷಿಪಣಿ, 4 ರಿಂದ 7 ಕಿ.ಮೀ ದೂರದಲ್ಲಿರುವ ಶತ್ರು ಪಡೆಯ ಯುದ್ಧ ಟ್ಯಾಂಕ್ಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಮೂರನೇ ತಲೆಮಾರಿನ ಎಟಿಜಿಎಂ (ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್) ಕ್ಷಿಪಣಿಯಾಗಿದೆ.
ಭಾರತೀಯ ಸೇನೆಗೆ 300 ನಾಗ್ ಕ್ಷಿಪಣಿಗಳು ಮತ್ತು 25 ನಾಮಿಕಾ (NAMICA- ನಾಗ್ ಕ್ಷಿಪಣಿ ವಾಹಕ) ಗಳನ್ನು ಸೇರಿಸಲು ರಕ್ಷಣಾ ಸಚಿವಾಲಯ 2018 ರಲ್ಲಿ ಅನುಮತಿ ನೀಡಿತ್ತು.