ನವದೆಹಲಿ: ಕಾಬೂಲ್ ವಿಶ್ವವಿದ್ಯಾಲಯದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದಾಳಿಯಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ರೆ, 22 ಮಂದಿ ಗಾಯಗೊಂಡಿದ್ದಾರೆ.
"ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದ ಭೀಕರ ಭಯೋತ್ಪಾದಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಈ ಘೋರ ಕೃತ್ಯದಲ್ಲಿ ತಮ್ಮ ಪುತ್ರ ಮತ್ತು ಪುತ್ರಿಯರನ್ನು ಕಳೆದುಕೊಂಡವರಿಗೆ ಭಾರತ ನಿಂತಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಅಫ್ಘಾನಿಸ್ತಾನದಲ್ಲಿ ಕಳೆದ 19 ವರ್ಷಗಳಲ್ಲಿ ಶಿಕ್ಷಣವು ಪ್ರಮುಖ್ಯತೆ ಪಡೆಯುತ್ತಿದೆ, ಅದನ್ನು ಸಂರಕ್ಷಿಸಬೇಕು. ಜ್ಞಾನ, ಶಿಕ್ಷಣ ಮತ್ತು ಶಾಂತಿಯ ಅನ್ವೇಷಣೆಯಲ್ಲಿ ಅಫ್ಘಾನ್ ಯುವಕರ ಆಕಾಂಕ್ಷೆಗಳಿಗೆ ಭಾರತ ವಂದಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಈ ಅಮಾನವೀಯ ಕೃತ್ಯವು, ಅಫ್ಘಾನಿಸ್ತಾನ ಸೇರಿದಂತೆ ಇತರೆ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ನೆನಪಿಸುತ್ತದೆ" ಎಂದು ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.