ನವದೆಹಲಿ: ಎಲ್ಲೆಡೆ ಇಂದು ಹೊಸ ವರ್ಷದ ಸಂಭ್ರಮ ಮನೆಮಾಡಿದೆ. ಕೋವಿಡ್ನಿಂದ ತತ್ತರಿಸಿದ ಜನರು ಉತ್ತಮ ದಿನಗಳಿಗಾಗಿ ಕಾಯುತ್ತಿದ್ದು, 2021 ಅನ್ನು ಸರಳ ಆಚರಣೆಗಳೊಂದಿಗೆ ಬರಮಾಡಿಕೊಂಡರು. ಹೌದು, ರಾಷ್ಟ್ರ ರಾಜಧಾನಿಯಲ್ಲಿ ಸಾಂಕ್ರಾಮಿಕ ಕೊರೊನಾ ರೋಗದ ಹಿನ್ನೆಲೆ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ಸರಳ ಸಂಭ್ರಮಾಚರಣೆ ಕಂಡುಬಂದಿದೆ.
ಯಾವುದೇ ಕಾರ್ಯಕ್ರಮಗಳು, ಸಭೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ಅನುಮತಿ ನೀಡಿಲ್ಲ. ಬೆಂಗಳೂರು, ಮುಂಬೈ ಮತ್ತು ಪುಣೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಆದ್ರೆ ನಿರ್ಬಂಧಗಳ ಹೊರತಾಗಿಯೂ ಜನರು ಪರಿಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ ತಮ್ಮ-ತಮ್ಮ ಇತಿಮಿತಿಯಲ್ಲೇ ಕುಟುಂಬ ಸದಸ್ಯರೊಂದಿಗೆ ಹೊಸ ವರ್ಷವನ್ನು ಆಚರಿಸಿದ್ದಾರೆ.
ಈ ಮೊದಲ ವರ್ಷಗಳಿಗೆ ಹೋಲಿಸಿದರೆ ಕೇರಳದಲ್ಲಿ ಕೆಲವೇ ಕೆಲವು ಜನರು ಕೊಚ್ಚಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಇನ್ನೂ ಕೋಲ್ಕತ್ತಾದಲ್ಲಿ ಪೊಲೀಸರು ಸಂಭ್ರಮಾಚರಣೆಯಲ್ಲಿ ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿದ್ದಾರೆ. ದಕ್ಷಿಣ ಕೋಲ್ಕತ್ತಾದ ಜಿಲ್ಲಾ ಆಯುಕ್ತ ಸುಧೀರ್ ನೀಲಕಂಠಂ ಮಾತನಾಡಿ, ನಾವು ಮಾಸ್ಕ್ ಧರಿಸುವ ಸಂಸ್ಕೃತಿಗೆ ಹೊಂದಿಕೊಂಡಿದ್ದೇವೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸುತ್ತಿದ್ದೇವೆ ಮತ್ತು ವಿಚಾರಣೆಗೆ ಒಳಪಡಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಹೊಸ ವರ್ಷದ ಮೊದಲ ದಿನ ಪ್ರಧಾನಿಯಿಂದ ಲೈಟ್ ಹೌಸ್ ಪ್ರಾಜೆಕ್ಟ್ನ ಕಾಮಗಾರಿ ಉದ್ಘಾಟನೆ
ಇನ್ನೂ ಪಂಜಾಬ್‌ನಲ್ಲಿ ಜನರು ಅಮೃತಸರದಲ್ಲಿರುವ ಹರ್ಮಂದೀರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿ ಹೊಸ ವರ್ಷವನ್ನು ಬರಮಾಡಿಕೊಂಡರು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕೂಡ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನರಿಗೆ ಶುಭಾಶಯ ತಿಳಿಸಿದರು.
ಗೋವಾದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.