ನವದೆಹಲಿ: ಲಡಾಖ್ ಭಾಗದಲ್ಲಿ ಚೀನಾ ನಡುವೆ ಘರ್ಷಣೆ ಮುಂದುವರೆದಿರುವ ನಡುವೆ ಭಾರತದ ಭೂಭಾಗ ಪ್ರವೇಶಿಸಿದ್ದ ಓರ್ವ ಚೀನಾ ಯೋಧನನ್ನು ಚೀನಾಗೆ ಹಸ್ತಾಂತರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇಲ್ಲಿನ ದಕ್ಷಿಣ ಪ್ಯಾಂಗೊಂಗ್ ಭಾಗದಲ್ಲಿ ಮೂರು ದಿನದ ಹಿಂದೆ ಚೀನಾ ಯೋಧ ಭಾರತದ ಭೂಭಾಗ ಪ್ರವೇಶಿಸಿದ್ದ. 10:30ರ ಸುಮಾರಿಗೆ ವಾಸ್ತವ ಗಡಿ ರೇಖೆಯನ್ನು ದಾಟಿ ಬಂದಿದ್ದ ಚೀನಾ ಯೋಧನನ್ನು ಭಾರತೀಯ ಸೇನೆ ಸೆರೆಹಿಡಿದಿತ್ತು. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಸೇನಾ ನಿಯಮದ ಪ್ರಕಾರ ಆತನನ್ನು ಚೀನಾ ಆರ್ಮಿಗೆ ಹಸ್ತಾಂತರಿಸಲಾಗಿದೆ.
ಭಾರತ-ಚೀನಾ ಯೋಧರ ಮಧ್ಯೆ ಕಳೆದ 8 ತಿಂಗಳಿನಿಂದ ಪೂರ್ವ ಲಡಾಖ್ ಭಾಗದಲ್ಲಿ ಗಡಿ ಗುರುತು ವಿಚಾರವಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪ್ಯಾಂಗೊಂಗ್ ನದಿ ದಂಡೆಯಲ್ಲಿ ಉಭಯ ದೇಶದ ಯೋಧರ ನಡುವೆ ಘರ್ಷಣೆ ಉಂಟಾಗಿದೆ.
ಭಾರತೀಯ ಸೇನೆಯು ಚೀನಾ ಸೈನಿಕನನ್ನು ಸೆರೆಹಿಡಿದ ತಕ್ಷಣವೇ ಆತನನ್ನು ಹಸ್ತಾಂತರಿಸುವಂತೆ ಚೀನಾ ಕೋರಿತ್ತು. ಇದು ಕಳೆದ ಮೂರು ತಿಂಗಳಲ್ಲಿ ಭಾರತವು ಚೀನಾದ ಸೈನಿಕನನ್ನು ಸೆರೆಹಿಡಿದು ಹಿಂದಿರುಗಿಸಿದ ಎರಡನೇ ಘಟನೆಯಾಗಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ದಾರಿ ತಪ್ಪಿ ಚೀನಾ ಸೈನಿಕನೊಬ್ಬ ಗಡಿಯೊಳಗೆ ಪ್ರವೇಶಿಸಿದ್ದ, ಬಳಿಕ ಆತನನ್ನು ಚುಶುಲ್-ಮೊಲ್ಡೊ ಗಡಿಭಾಗದಲ್ಲಿ ಚೀನಾಗೆ ಹಸ್ತಾಂತರಿಸಲಾಗಿತ್ತು.
ಪೂರ್ವ ಲಡಾಖ್ ಭಾಗದಲ್ಲಿ ಚೀನಾ ಘರ್ಷಣೆಗಿಳಿದ ಬಳಿಕ ಸೇನಾ ಮುಖ್ಯಸ್ಥ ನರವಾಣೆ ಭೇಟಿ ನೀಡಿದ್ದರು. ಈ ವೇಳೆ ಭಾರತೀಯ ಸೇನೆ ಎಲ್ಲಾ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದಿದ್ದರು.
ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಕೊರಿಯಾ ಭೇಟಿ