ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗುತ್ತಿದ್ದು, ಇದರ ಮಧ್ಯೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 34,602 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಇದೀಗ ಮಾಹಿತಿ ನೀಡಿದೆ.
ಸದ್ಯ ದೇಶದಲ್ಲಿ 13,06,002 ಸೋಂಕಿತ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲೇ 3,47,502, ತಮಿಳುನಾಡಿನಲ್ಲಿ 1,99,749 ಹಾಗೂ ದೆಹಲಿಯಲ್ಲಿ 1,27,364 ಕೇಸ್ಗಳಿವೆ. ಕಳೆದ 24 ಗಂಟೆಯಲ್ಲಿ 740 ಜನರು ಕೋವಿಡ್ನಿಂದಾಗಿ ಸಾವನ್ನಪ್ಪಿದ್ದು, ನಿನ್ನೆ 45,720 ಜನರಿಗೆ ಸೋಂಕು ತಗುಲಿತ್ತು. ಜತೆಗೆ 1,129 ಜನರು ಸಾವನ್ನಪ್ಪಿದ್ದರು. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ 30 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ ಗುಣಮುಖರಾಗುತ್ತಿರುವ ಸಂಖ್ಯೆ ಪ್ರತಿಶತ ಶೇ.63. 45ರಷ್ಟಾಗಿದೆ.
ದೇಶದಲ್ಲಿ ಇಲ್ಲಿಯವರೆಗೆ 8 ಲಕ್ಷಕ್ಕೂ ಅಧಿಕ ಸೋಂಕಿತರು ಕೋವಿಡ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಸದ್ಯ 4 ಲಕ್ಷ 40 ಸಾವಿರಕ್ಕೂ ಅಧಿಕ ಸಕ್ರಿಯ ಕೇಸ್ಗಳಿವೆ. ಇಂದು ಕೂಡ ತಮಿಳುನಾಡಿನಲ್ಲಿ 6,785, ಕರ್ನಾಟಕದಲ್ಲಿ 5,007, ಆಂಧ್ರಪ್ರದೇಶದಲ್ಲಿ 8147, ಮಹಾರಾಷ್ಟ್ರದಲ್ಲಿ 9,895 ಕೋವಿಡ್ ಪ್ರಕರಣ ದಾಖಲಾಗಿವೆ.