ಹೈದರಾಬಾದ್: 2025ರ ವೇಳೆಗೆ, ವಿದೇಶಗಳಿಗೆ ಶಸ್ತ್ರಾಸ್ತ್ರ ಹಾಗೂ ಸೇನಾ (ಮಿಲಿಟರಿ) ಉಪಕರಣಗಳ ರಫ್ತಿನ ಮೂಲಕ, 35,000 ಕೋಟಿ ವಾರ್ಷಿಕ ಆದಾಯ ಗಳಿಸುವ ಗುರಿಯೊಂದಿಗೆ ಭಾರತ ಸ್ವದೇಶೀಯವಾಗಿ ಉತ್ಪಾದಿಸಲಾಗುವ ಶಸ್ತ್ರಾಸ್ತ್ರಗಳ ರಫ್ತಿಗೆ ಅವುಗಳನ್ನು ಆಮದು ಮಾಡಿಕೊಳ್ಳಬಲ್ಲ 14 ದೇಶಗಳ ಪಟ್ಟಿಯನ್ನು ಈಗ ಸಿದ್ದ ಪಡಿಸಿದೆ. ಮುಂದಿನ ಐದು ವರ್ಷಗಳಲ್ಲಿ ಸೇನಾ ಶಸ್ತ್ರಾಸ್ತ್ರ ರಫ್ತು ಮಾಡುವ ಜಗತ್ತಿನ ಐದು ದೇಶಗಳ ಪೈಕಿ ಒಂದಾಗುವ ಗುರಿಯೊಂದಿಗೆ, ಭಾರತ ಈ ಮಹತ್ವಾಕಾಂಕ್ಷೆಯ ಪಟ್ಟಿ ಸಿದ್ಧಪಡಿಸಿದೆ.
"ನಾವು ಸೇನಾ ಶಸ್ತ್ರಾಸ್ತ್ರ, ಮಿಲಿಟರಿ ಉಪಕರಣಗಳನ್ನು ರಫ್ತು ಮಾಡಲು ಸಾಧ್ಯವಿರುವ, ಈ 14 ದೇಶಗಳ ವಿವರವಾದ ಮಾಹಿತಿ ಸಂಗ್ರಹಿಸಿದ್ದೇವೆ. ಈ ಎಲ್ಲಾ ದೇಶಗಳಿಗೆ ನಾವು ಸೇನಾ ಉಪಕರಣಗಳನ್ನು ರಫ್ತು ಮಾಡಬಹುದು. ಈ ಎಲ್ಲ ದೇಶಗಳು ಏಷ್ಯಾ ಮತ್ತು ಮಧ್ಯಪ್ರಾಚ್ಯದ ರಾಷ್ಟ್ರಗಳಾಗಿದ್ದು, ಭಾರತದ ಜೊತೆಗೆ ಸ್ನೇಹ ಸಂಬಂಧ ಹೊಂದಿವೆ” ಎಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
"ಮೇಕ್ ಇನ್ ಇಂಡಿಯಾ" ಕಲ್ಪನೆಗೆ ಅನುಗುಣವಾಗಿ, ಭಾರತ ಸ್ವದೇಶೀಯವಾಗಿ ಸೇನಾ ಉಪಕರಣ, ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ಪ್ರಯತ್ನ ಕೈಗೊಂಡಿದೆ. ಈವರಗೆ ಭಾರತ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ದೇಶ ಎಂಬ ಖ್ಯಾತಿ ಹೊಂದಿತ್ತು. ಈ ಪ್ರಯತ್ನ ಇದಕ್ಕೆ ತದ್ವಿರುದ್ಧವಾಗಿದೆ. ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್ ಐ ಪಿ ಆರ್ ಐ )ಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸೌದಿ ಅರೇಬಿಯಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಉಪಕರಣ ಆಮದು ರಾಷ್ಟ್ರ ಭಾರತವಾಗಿದೆ.
ಸೇನಾ ಉಪಕರಣಗಳ ರಫ್ತಿನ ಮೌಲ್ಯವನ್ನು ಗಣನೆಗೆ ತೆಗೆದುಕೊಂಡರೆ, ಭಾರತ, ವಿಶ್ವದಲ್ಲಿ 23ನೇ ಸ್ಥಾನದಲ್ಲಿದೆ. ಭಾರತದ ಪ್ರಮುಖ ಗ್ರಾಹಕ ರಾಷ್ಟ್ರಗಳೆಂದರೆ ಮಾರಿಷಸ್, ಮ್ಯಾನ್ಮಾರ್ (ಬರ್ಮಾ) ಮತ್ತು ಶ್ರೀಲಂಕಾ.
"ಮೇಕ್ ಇನ್ ಇಂಡಿಯಾದಿಂದ ಮೇಕ್ ಫಾರ್ ದ ವರ್ಲ್ಡ್" ನಮ್ಮ ಮುಂದಿನ ದಾರಿ ಎನ್ನುತ್ತಾರೆ ದೇಶದ ರಕ್ಷಣಾ ಕಾರ್ಯದರ್ಶಿ (ಉತ್ಪಾದನೆ) ರಾಜ್ ಕುಮಾರ್. ಗುರುವಾರ ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಎಂಬ ವಿಷಯದ ಮೇಲಣ ವೆಬ್ ನಾರ್ನಲ್ಲಿ ಮಾತನಾಡಿದ ಅವರು, ತನ್ನ ರಕ್ಷಣಾ ಉತ್ಪನ್ನಗಳನ್ನು ರಫು ಮಾಡಲು ಸಾಧ್ಯವಿರುವ ಮಿತ್ರ ರಾಷ್ಟ್ರಗಳ ವಿವರವನ್ನು ಭಾರತ ತನ್ನ ರಕ್ಷಣಾ ಕ್ಷೇತ್ರದ ತಜ್ಞರ ಹಾಗು ಸಂಸ್ಥೆಗಳ ನೆರವಿನಿಂದ ಸಿದ್ಧ ಪಡಿಸುತ್ತಿದೆ ಎಂದು ತಿಳಿಸಿದರು.
ರಷ್ಯಾದ ಸಹಯೋಗದೊಂದಿಗೆ ತಯಾರಿಸಲಾದ ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ, ಭಾರತೀಯ ರಾಡಾರ್‌ಗಳು, ಬಂದೂಕುಗಳು, ಮದ್ದುಗುಂಡುಗಳು ಇತ್ಯಾದಿಗಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ಈವರಗೆ ಭಾರತ, ಮೂಲ ಉಪಕರಣ ತಯಾರಕರಿಂದ, ಉತ್ಪಾದನಾ ಪರವಾನಗಿ ಪಡೆದು, ದೇಶೀಯವಾಗಿ ಅಂತಹ ಉತ್ಪನ್ನಗಳನ್ನು ತಯಾರಿಸುತ್ತಿತ್ತು. ಆದರೆ, ಇದೀಗ, ದೇಶ ಹೊಸ ವ್ಯವಸ್ಥೆಯತ್ತ ಹೊರಳುತ್ತಿದೆ. ಇದೀಗ ಭಾರತ ಜಂಟಿ ಹೂಡಿಕೆ ಮೂಲಕ, ಸಹ-ಉತ್ಪಾದನಾ ಪ್ರಯತ್ನಕ್ಕೆ ಮುಂದಾಗಿದೆ.
ಈ ನಡುವೆ ಈಗಾಗಲೇ, ಕೇಂದ್ರ ರಕ್ಷಣಾ ಸಚಿವಾಲಯವು ‘ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ (ಡಿಪಿಇಪಿಪಿ) 2020’ ಕರಡು ಪ್ರತಿಯನ್ನು ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಈ ಹೊಸ ನೀತಿಗೆ ಸಾರ್ವಜನಿಕರಿಂದ ಅಭಿಪ್ರಾಯ ಕೋರಿದೆ.
ಭಾರತದಲ್ಲಿ ರಕ್ಷಣಾ ಉಪಕರಣಗಳ ಉತ್ಪಾದನೆಯ ಏಕ ಸ್ವಾಮ್ಯತ್ವ ಬಹುತೇಕ, ಶಸ್ತ್ರಾಸ್ತ್ರ ಕಾರ್ಖಾನೆ (ಆರ್ಡ್‌ನೆನ್ಸ್ ಫಾಕ್ಟರಿಸ್) ಮತ್ತು ರಕ್ಷಣಾ ವಲಯದ ಸಾರ್ವಜನಿಕ ಉದ್ಯಮಗಳ (ಡಿಪಿಎಸ್‌ಯು) ಕೈಯಲ್ಲಿತ್ತು. ಆದರೆ, 2001ರಲ್ಲಿ ಭಾರತ ಸರಕಾರ ಈ ಸಂಬಂಧ ತನ್ನ ನೀತಿ ಬದಲಾಯಿಸಿಕೊಂಡಿತು. ಖಾಸಗಿ ವಲಯದ ಕಂಪನಿಗಳಿಗೂ ಅದು ರಕ್ಷಣಾ ಉತ್ಪನ್ನ ತಯಾರಿಕೆಗೆ ಅವಕಾಶ ನೀಡಿದೆ.
ಈ ನೀತಿ ಬದಲಾವಣೆ, ಭಾರತದಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಬಹಳಷ್ಟು ಬದಲಾವಣೆಗೆ ಕಾರಣವಾಯಿತು. ನಾನಾ ಬಗೆಯ ಶಸ್ತ್ರಾಸ್ತ್ರಗಳು, ಸೇನಾ ಉಪಕರಣಗಳು ಭಾರತದಲ್ಲೇ ತಯಾರಾಗಲು ಸಾಧ್ಯವಾಯಿತು. ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಭಾರೀ ಸೇನಾ ವಾಹನಗಳು, ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು, ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ಕ್ಷಿಪಣಿಗಳು, ಮದ್ದುಗುಂಡುಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಭೂ ಕೆಲಸ ನಿರ್ವಹಿಸಬಲ್ಲ ವಾಹನಗಳು ಹೀಗೆ ನಾನಾ ಬಗೆಯ ಯುದ್ಧ ಹಾಗು ಸೇನಾ ಉಪಲರಣಗಳು ದೇಶೀಯವಾಗಿಯೇ ನಿರ್ಮಿಸಲ್ಪಟ್ಟವು.
2019-20 ರಲ್ಲಿ, ದೇಶದ ರಕ್ಷಣಾ ಉದ್ಯಮದ ಗಾತ್ರ ಸುಮಾರು 80 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ, ಏರೋಸ್ಪೇಸ್ ಮತ್ತು ನೌಕಾ ಹಡಗು ನಿರ್ಮಾಣ ಉದ್ಯಮ ಕೂಡ ಸೇರಿದೆ. ಇದರಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ (ಆರ್ಡ್‌ನೆನ್ಸ್ ಫಾಕ್ಟರಿಸ್) ಮತ್ತು ರಕ್ಷಣಾ ವಲಯದ ಸಾರ್ವಜನಿಕ ಉದ್ಯಮಗಳ (ಡಿಪಿಎಸ್‌ಯು) ಪಾಲು ಸುಮಾರು 63 ಸಾವಿರ ಕೋಟಿ ರೂಪಾಯಿ. ಖಾಸಗಿ ರಕ್ಷಣಾ ಉದ್ಯಮ ವಲಯವು ಸುಮಾರು 17 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದವು.