ನವದೆಹಲಿ: ಮುಕ್ತ ವಾಣಿಜ್ಯ ಒಪ್ಪಂದ ಕುರಿತಂತೆ ವಾಣಿಜ್ಯ ಮತ್ತು ಹೂಡಿಕೆ ಸಂಬಂಧಗಳ ಕುರಿತು ಹೊಸ ಉನ್ನತ ಮಟ್ಟದ ಮಾತುಕತೆಗಳು ಭಾರತ ಮತ್ತು ಯುರೋಪ್ ಒಕ್ಕೂಟ (ಇಯು - ಯುರೋಪಿಯನ್ ಯೂನಿಯನ್) ನಿಗದಿಯಾಗಿದ್ದರೂ, ಸುದೀರ್ಘ ಕಾಲದಿಂದ ಹೊಯ್ದಾಟದಲ್ಲಿದ್ದ ಇಂತಹದೊಂದು ಒಪ್ಪಂದವು ಸನಿಹದ ಭವಿಷ್ಯದಲ್ಲಿ ಫಲಪ್ರದವಾಗುವ ಸಾಧ್ಯತೆಗಳು ಇನ್ನೂ ಕಂಡುಬರುತ್ತಿಲ್ಲ ಎನ್ನುತ್ತಿದ್ದಾರೆ ತಜ್ಞರು.
ಏಷ್ಯದ ಎರಡು ದೇಶಗಳಾದ ಭಾರತ ಮತ್ತು ವಿಯೆಟ್ನಾಂ ಯುರೋಪಿನ ಆಕರ್ಷಕ ಮಾರುಕಟ್ಟೆಗೆ ಲಗ್ಗೆ ಇಡಲು ಪ್ರಯತ್ನಗಳನ್ನು ನಡೆಸುತ್ತಿರುವ ಮಧ್ಯೆಯೇ, ಯುರೋಪ್ ಒಕ್ಕೂಟದ ಜೊತೆಗೆ ಮಾತ್ರ ಎಂಬ ಮುಕ್ತ ವಾಣಿಜ್ಯ ಒಪ್ಪಂದವನ್ನು (ಎಫ್‌ಟಿಎ - ಫ್ರೀ ಟ್ರೇಡ್ ಅಗ್ರೀಮೆಂಟ್) ವಿಯೆಟ್ಮಾಂ ಮಾಡಿಕೊಂಡಿರುವುದು ಭಾರತದ ಪಾಲಿಗೆ ವ್ಯತಿರಿಕ್ತವಾಗಿ ಕೆಲಸ ಮಾಡಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಯುರೋಪ್ ಪರಿಷತ್ ಅಧ್ಯಕ್ಷ ಚಾರ್ಲ್ಸ್ ಮೈಕೇಲ್ ಮತ್ತು ಯೂರೋಪ್ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ಜುಲೈ 15ರಂದು ನಡೆದಿದ್ದ 15ನೇ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಸಾದೃಶ್ಯ (ವರ್ಚುವಲ್) ಮಾದರಿಯ ಭೇಟಿ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಮತ್ತು ಭದ್ರತಾ ಸಂಬಂಧಗಳು, ವಾಣಿಜ್ಯ ಮತ್ತು ಹೂಡಿಕೆ, ಹಾಗೂ ಆರ್ಥಿಕ ಕ್ಷೇತ್ರಗಳು ಸೇರಿದಂತೆ ಉಭಯ ಪಕ್ಷಗಳು ಸಹಕಾರ ಕುರಿತು ಪರಾಮರ್ಶೆ ನಡೆಸಲಾಗಿತ್ತು.
ಶೃಂಗಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಅವರು, ಶೃಂಗಸಭೆಯ ಅತ್ಯಂತ ಮಹತ್ವದ ಪರಿಣಾಮಗಳ ಪೈಕಿ ವಾಣಿಜ್ಯ ಮತ್ತು ಹೂಡಿಕೆ ಸಂಬಂಧಗಳ ಕುರಿತಂತೆ ಉನ್ನತ ಮಟ್ಟದ ಮಾತುಕತೆಗೆ ಚಾಲನೆ ನೀಡುವುದು ಕೂಡಾ ಒಂದಾಗಿದೆ. ವಾಣಿಜ್ಯ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ವಿಷಯಗಳ ಜೊತೆಗೆ ಪೂರೈಕೆ ಸರಪಳಿ ಕೊಂಡಿಗಳ ಕುರಿತೂ ಇದು ಚರ್ಚೆ ನಡೆಸಲಿದೆ ಎಂದು ಹೇಳಿದ್ದರು.
“ಕೋವಿಡ್ ನಂತರದ ಸಂದರ್ಭದಲ್ಲಿ ಉಭಯ ಪಕ್ಷಗಳಲ್ಲಿ ಆರ್ಥಿಕ ಪುನಶ್ಚೇತನ ಆದ್ಯತೆಗಳು, ಪೂರೈಕೆ ಸರಪಳಿ ಕೊಂಡಿಗಳನ್ನು ವೈವಿಧ್ಯಮಯಗೊಳಿಸುವಲ್ಲಿಯ ಆಸಕ್ತಿಗಳು, ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ವಾಣಿಜ್ಯ ಮತ್ತು ಹೂಡಿಕೆ ಮೈತ್ರಿಯ ಪೂರ್ಣ ಸಾಮರ್ಥ್ಯವನ್ನು ತಿಳಿದುಕೊಳ್ಳುವಲ್ಲಿ ಉಭಯ ಪಕ್ಷಗಳ ಮೇಲೆ ಬಲವಾದ ಒತ್ತು ನೀಡುವುದು ಹಾಗೂ ಉಭಯ ಪಕ್ಷಗಳ ನಡುವಿನ ವಾಣಿಜ್ಯ-ಸಂಬಂಧಿ ವಿಷಯಗಳನ್ನು ಇತ್ಯರ್ಥಪಡಿಸುವ ಕುರಿತು ಎರಡೂ ಕಡೆಯ ನಾಯಕರು ಚರ್ಚೆಗಳನ್ನು ನಡೆಸಿದರು” ಎಂದು ಸ್ವರೂಪ್ ಹೇಳಿದ್ದರು.
“ವಿದೇಶಿ ನೇರ ಹೂಡಿಕೆ (ಎಫ್‌ಡಿಐ - ಫಾರೆನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್) ಆಕರ್ಷಿಸುವುದು ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಸುಲಭವಾಗಿಸುವುದನ್ನು ಸುಧಾರಿಸುವುದೂ ಸೇರಿದಂತೆ ನಿಯಂತ್ರಣ ವಾತಾವರಣವನ್ನು ಮತ್ತಷ್ಟು ಉದಾರಗೊಳಿಸುವಲ್ಲಿ ಭಾರತ ಸರಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಆದ್ಯತೆ ಕೊಡುವುದಕ್ಕೆ ನಮ್ಮ ಪ್ರಧಾನಮಂತ್ರಿಗಳು ಒತ್ತು ನೀಡಿದ್ದರು” ಎಂದು ಅವರು ಹೇಳಿದ್ದರು.
“ಭಾರತದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಯುರೋಪ್‌ನ ವಾಣಿಜ್ಯ ಸಂಸ್ಥೆಗಳನ್ನು ಆಹ್ವಾನಿಸಿದ್ದ ಅವರು, ಆತ್ಮನಿರ್ಭರ ಭಾರತವು ದೇಶಿ ಉತ್ಪಾದನೆಯನ್ನು ಜಾಗತಿಕ ಪೂರೈಕೆ ಜಾಲಗಳೊಂದಿಗೆ ಜೋಡಿಸುವ ಉದ್ದೇಶ ಹೊಂದಿದೆ ಎಂಬ ಸಂದೇಶವನ್ನು ರವಾನಿಸಿದ್ದರು.”
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2018ರಲ್ಲಿ ಇಡೀ ಯುರೋಪ್ ಒಕ್ಕೂಟವು ಭಾರತದ ಅತಿ ದೊಡ್ಡ ವಾಣಿಜ್ಯ ಪಾಲುದಾರವಾಗಿದ್ದರೆ, ಭಾರತವು ಯುರೋಪ್ ಒಕ್ಕೂಟದ ಒಂಬತ್ತನೇ ಅತಿ ದೊಡ್ಡ ವಾಣಿಜ್ಯ ಪಾಲುದಾರ ದೇಶವಾಗಿತ್ತು. ಯುರೋಪ್ ಒಕ್ಕೂಟದೊಂದಿಗೆ ಭಾರತದ ದ್ವಿಪಕ್ಷೀಯ ವಾಣಿಜ್ಯವು 2018-19ರಲ್ಲಿ $57.17 ಬಿಲಿಯನ್ ರಫ್ತು ಹಾಗೂ $58.42 ಬಿಲಿಯನ್ ಪ್ರಮಾಣದ ಆಮದಿನ ಜೊತೆಗೆ $115.6 ಬಿಲಿಯನ್ ಆಗಿತ್ತು. ಭಾರತವು ಯುರೋಪ್ ಒಕ್ಕೂಟದ ನಾಲ್ಕನೇ ಅತಿದೊಡ್ಡ ಸೇವಾ ರಫ್ತುದಾರ ಹಾಗೂ ಯುರೋಪ್ ಒಕ್ಕೂಟದ ಆರನೇ ಅತಿ ದೊಡ್ಡ ಸೇವಾ ರಫ್ತುಗಳ ಗಮ್ಯ ದೇಶವಾಗಿದೆ.
ಯುರೋಪ್ ಒಕ್ಕೂಟವು ಭಾರತದ ಅತಿ ದೊಡ್ಡ ವಿದೇಶಿ ನೇರ ಹೂಡಿಕೆಯ ಮೂಲವೂ ಆಗಿದೆ. ಏಪ್ರಿಲ್ 2000 ಮತ್ತು ಜೂನ್ 2018ರ ಅವಧಿಯ ನಡುವೆ, ಯುರೋಪ್ ಒಕ್ಕೂಟ ದೇಶಗಳಿಂದ ಭಾರತಕ್ಕೆ ಒಟ್ಟು $90.7 ಬಿಲಿಯನ್ ಹೂಡಿಕೆ ಹರಿದು ಬಂದಿದ್ದು, ಇದು ದೇಶದ ಒಟ್ಟು ವಿದೇಶಿ ನೇರ ಹೂಡಿಕೆ ಪ್ರಮಾಣದ ಶೇಕಡಾ 24ರಷ್ಟಿದೆ. ಹೂಡಿಕೆ ಸುಲಭಗೊಳಿಸುವಿಕೆ ವ್ಯವಸ್ಥೆಯು ಯುರೋಪ್ ಒಕ್ಕೂಟದಿಂದ ವಿದೇಶಿ ನೇರ ಹೂಡಿಕೆ ಹರಿವನ್ನು ಪ್ರೋತ್ಸಾಹಿಸುತ್ತಿದೆ.
ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮಾರ್ಚ್ 2017ರಂದು ನವದೆಹಲಿಯಲ್ಲಿ ತನ್ನ ಖಾತೆ ತೆರೆಯುವ ಮೂಲಕ ದೇಶದ ವಿವಿಧ ಯೋಜನೆಗಳಿಗೆ ಹಣಕಾಸು ನೆರವನ್ನು ವಿಸ್ತರಿಸಿದೆ. ಯುರೋಪ್ ಒಕ್ಕೂಟದಲ್ಲಿ ಭಾರತೀಯ ಹೂಡಿಕೆಗಳ ಪ್ರಮಾಣ ಅಂದಾಜು 50 ಬಿಲಿಯನ್ ಯುರೋಗಳು ಎನ್ನಲಾಗಿದೆ.
ಇಷ್ಟೆಲ್ಲದರ ಹೊರತಾಗಿಯೂ, ಉಭಯ ಪಕ್ಷಗಳಿಗೆ ವಿಶಾಲ-ಆಧಾರದ ವಾಣಿಜ್ಯ ಮತ್ತು ಹೂಡಿಕೆ ಒಪ್ಪಂದ (ಬಿಟಿಐಎ) ಎಂದು ಕರೆಯಲಾಗುವ ಎಫ್‌ಟಿಎಗೆ ಕುರಿತಂತೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.
ಬಿಟಿಐಎ ಕುರಿತ ಮಾತುಕತೆಗಳು 2007ರಲ್ಲಿ ಪ್ರಾರಂಭವಾಗಿದ್ದರೂ, ಅಂದಾಜು ಒಂದು ಡಜನ್ ಸಭೆಗಳ ನಂತರವೂ 2013ರಲ್ಲಿ ಅದನ್ನು ನನೆಗುದಿಯಲ್ಲಿ ಇಡಲಾಯಿತು.
ಈ ಕುರಿತು ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಎಲ್ಲಾ ದೇಶಗಳೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು (ಬಿಐಟಿ – ಬೈಲ್ಯಾಟರಲ್ ಇನ್ವೆಸ್ಟ್‌ಮೆಂಟ್ ಟ್ರೀಟೀಸ್) ಭಾರತ ಕೈಬಿಟ್ಟಿದ್ದು, ಇದರಿಂದಾಗಿ ಯುರೋಪಿನ ದೇಶಗಳ ಹೂಡಿಕೆಗಳು ಈಗ ಯಾವುದೇ ರಕ್ಷಣೆ ಹೊಂದಿಲ್ಲ.
ಹೊಸ ಬಿಐಟಿ ಮಾದರಿಯನ್ನು ಡಿಸೆಂಬರ್ 2015ರಲ್ಲಿ ಹೊಂದುವ ಮೂಲಕ ಭಾರತವು ಹಳೆಯ ಬಿಐಟಿಯನ್ನು ಸ್ಥಗಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಯುರೋಪ್ ಒಕ್ಕೂಟದ ೨೮ ಸದಸ್ಯ ದೇಶಗಳು ಹೂಡಿಕೆ ರಕ್ಷಿಸುವ ಮಾತುಕತೆಗಳನ್ನು ನಡೆಸುವ ಜವಾಬ್ದಾರಿಯನ್ನು ಯುರೋಪ್ ಒಕ್ಕೂಟಕ್ಕೆ ವರ್ಗಾಯಿಸಿದವು. ಆದರೆ, ಬ್ರೆಕ್ಸಿಟ್‌ನಿಂದಾಗಿ ಭಾರತ-ಯುರೋಪ್ ಒಕ್ಕೂಟ ವಾಣಿಜ್ಯ ಸಂಬಂಧಗಳ ಮೇಲೆ ಅನಿಶ್ಚಯತೆ ಉಂಟಾಗಿವೆ ಎನ್ನುತ್ತಾರೆ ವೀಕ್ಷಕರು. ಅಲ್ಲದೇ ಬದಲಾಗುತ್ತಿರುವ ಬಹು ಆಯಾಮದ ಆರ್ಥಿಕ ಒಪ್ಪಂದಗಳು ಹೂಡಿಕೆ ರಕ್ಷಣೆ ಕುರಿತು ಕಳವಳವನ್ನು ಹುಟ್ಟುಹಾಕಿವೆ.
ಈ ಕುರಿತು ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಜೇಶನ್ಸ್‌ನ (ಎಫ್‌ಐಇಒ – ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ) ಪ್ರಧಾನ ನಿರ್ದೇಶಕ ಅಜಯ್ ಸಹಾಯ್, ಆಟೊಮೊಬೈಲ್ಸ್‌ಗಳು ಮತ್ತು ಆಟೊ ಬಿಡಿಭಾಗಗಳು, ವೈನ್ ಮತ್ತು ಹೈನು ಉತ್ಪನ್ನಗಳಲ್ಲದೇ ದತ್ತಾಂಶ ಸುರಕ್ಷತೆಯಂತಹ ವಿಷಯಗಳು ಬಿಟಿಐಎಗೆ ಸಂಬಂಧಿಸಿದಂತೆ ಭಾರತ-ಯುರೋಪ್ ಒಕ್ಕೂಟವನ್ನು ತಡೆಹಿಡಿಯುತ್ತಿವೆ ಎನ್ನುತ್ತಾರೆ.
“ರಫ್ತು ಸಂಸ್ಥೆಯಾಗಿ ನಾವೆಲ್ಲರೂ ಎಫ್‌ಟಿಎನ ಪರವಾಗಿದ್ದೇವೆ,” ಎನ್ನುತ್ತಾರೆ ಸಹಾಯ್. “ಆದರೆ ಪರಸ್ಪರರು ಎಷ್ಟೊಂದು ಬಿಟ್ಟುಕೊಡುತ್ತಾರೆ ಎಂಬುದನ್ನು ಇದೆಲ್ಲ ಅವಲಂಬಿಸಿದೆ. ಉಭಯ ಪಕ್ಷಗಳೂ ಸಮತೋಲಿತ ವಿಧಾನವನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ” ಎಂಬುದು ಅವರ ಅಭಿಮತ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಯುರೋಪ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಗುಲ್ಷನ್ ಸಚದೇವ ಅವರ ಪ್ರಕಾರ, ಭಾರತದ ಪ್ರಮುಖ ವಾಣಿಜ್ಯ ಪಾಲುದಾರ ದೇಶವಾಗಿರುವ ಬ್ರಿಟನ್, ಯುರೋಪ್ ಒಕ್ಕೂಟದಿಂದ ನಿರ್ಗಮಿಸುವುದು ಅನಿವಾರ್ಯವಾದ ಪಕ್ಷದಲ್ಲಿ ಬಿಟಿಐಎಗೆ ಸಂಬಂಧಿಸಿದಂತೆ ಭಾರತ ಪರ್ಯಾಯ ಸಾಮಿಪ್ಯ ದಾರಿಯನ್ನು ಹುಡುಕಬೇಕಾಗುತ್ತದೆ.
“ಯುರೋಪ್ ಒಕ್ಕೂಟದೊಂದಿಗೆ ಬ್ರಿಟನ್ ಎಂತಹ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುತ್ತದೆ ಎಂಬುದು ಮುಖ್ಯವಾಗುತ್ತದೆ,” ಎನ್ನುವ ಸಚದೇವ್, “ಈ ಕಾರಣಕ್ಕಾಗಿ ಯುರೋಪ್‌ನ ನಿರಾಶ್ರಿತರ ವಿಷಯ ಮತ್ತು ಯುರೋಪಿನ ಆರ್ಥಿಕತೆಯ ಅಂಶಗಳು ಸಹ ಮೇಲಕ್ಕೆ ಬರುತ್ತವೆ” ಎನ್ನುತ್ತಾರೆ.
ಜುಲೈ ೧೫ರ ಶೃಂಗಸಭೆಯಲ್ಲಿ ವಾಣಿಜ್ಯ ಮತ್ತು ಹೂಡಿಕೆ ಸಂಬಂಧಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಮಾತುಕತೆಗಳು ನಡೆದಿದ್ದಾಗ್ಯೂ, ಬಿಟಿಐಎ ಮಾತುಕತೆಗಳನ್ನು ಪುನಾರಂಭಿಸುವ ಕುರಿತು ಮಾತ್ರ ಅದು ಚರ್ಚಿಸಬಹುದಷ್ಟೇ. ಹೀಗಾಗಿ ನಿಕಟ ಭವಿಷ್ಯದಲ್ಲಿ ಯಾವುದೇ ಒಪ್ಪಂದ ಈಡೇರುವ ಸಾಧ್ಯತೆ ವಿರಳ ಎನ್ನುತ್ತಾರೆ ಅವರು.
ವಿಯೆಟ್ನಾಂ ಈ ವರ್ಷದ ಜೂನ್‌ನಲ್ಲಿ ಯುರೋಪ್ ಒಕ್ಕೂಟದೊಂದಿಗೆ ಎಫ್‌ಟಿಎ ಅಂತಿಮಗೊಳಿಸುವ ಮೂಲಕ, ಭಾರತ ಇನ್ನಷ್ಟು ಅನಾನುಕೂಲ ಪರಿಸ್ಥಿತಿಗೆ ಈಡಾಗಿದೆ. ಯುರೋಪ್ ಒಕ್ಕೂಟ-ವಿಯೆಟ್ನಾಂ ನಡುವಿನ ಮುಕ್ತ ವಾಣಿಜ್ಯ ಒಪ್ಪಂದವು (ಇವೆಫ್‌ಟಿಎ) ನೈಋತ್ಯ ಏಷ್ಯ ದೇಶಗಳ ಸಂಘಟನೆ (ಎಎಸ್‌ಇಎಎನ್) ಜೊತೆಗಿನ ಯುರೋಪ್ ಒಕ್ಕೂಟದ ಎರಡನೇ ಎಫ್‌ಟಿಎ ಆಗಿದ್ದು, ಸಿಂಗಾಪುರ ಜೊತೆ ಮೊದಲ ಒಪ್ಪಂದವಾಗಿತ್ತು.
“ಭಾರತ ಮತ್ತು ವಿಯೆಟ್ನಾಂ ದೇಶಗಳೆರಡೂ ಯುರೋಪ್ ಮಾರುಕಟ್ಟೆಗೆ ಪ್ರವೇಶಿಸಲು ಸ್ಪರ್ಧೆ ನಡೆಸುತ್ತಿವೆ,” ಎನ್ನುವ ಸಹಾಯ್, “ಈಗ ವಿಯೆಟ್ನಾಂ ದೇಶ ಎಫ್‌ಟಿಎ ಒಪ್ಪಂದ ಮಾಡಿಕೊಳ್ಳುವ ಮೂಲಕ, ಆ ದೇಶದ ಸಿದ್ಧ ಉಡುಪು, ಪಾದರಕ್ಷೆ, ಚರ್ಮದ ವಸ್ತುಗಳು, ಪೀಠೋಪಕರಣ, ಕಡಲ ಉತ್ಪನ್ನಗಳು ಮತ್ತು ಕೆಲವು ಕೃಷಿ ಉತ್ಪನ್ನಗಳಿಗೆ ಯುರೋಪ್ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಅವಕಾಶವಾಗುತ್ತದೆ. ಆಮದು-ರಫ್ತು ಸುಂಕದ ಲಾಭ ವಿಯೆಟ್ನಾಮ್‌ಗೆ ದಕ್ಕುತ್ತದೆ” ಎನ್ನುತ್ತಾರೆ.
-ಆರೂನಿಮ್ ಭುಯನ್