ನವದೆಹಲಿ: ಚೀನಾ ಹಾಗೂ ಭಾರತದ ನಡುವೆ ಉದ್ವಿಗ್ನ ಸ್ಥಿತಿ ಮುಂದುವರೆಯುತ್ತಿದ್ದಂತೆ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. ಸೋಮವಾರ ಕಾರ್ಪ್ಸ್ ಕಮಾಂಡರ್ ಹಂತದ 6ನೇ ಸಭೆ ನಡೆದಿದೆ.
ಪೂರ್ವ ಲಡಾಖ್ನ ಮೋಲ್ಡೋದಲ್ಲಿ ಸುಮಾರು 13 ಗಂಟೆ ಕಾಲ ಎರಡೂ ರಾಷ್ಟ್ರಗಳ ಅಧಿಕಾರಿಗಳು ಸಭೆ ನಡೆಸಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ಸಭೆ ರಾತ್ರಿ 11 ಗಂಟೆಗೆ ಮುಕ್ತಾಯಗೊಂಡಿದೆ.
ಈ ಸಭೆಯ ನಂತರ ಇನ್ನೂ ಉನ್ನತಾಧಿಕಾರಿಗಳ ಸಭೆಯ ಬಗ್ಗೆ ನಿರೀಕ್ಷೆಯಿದ್ದು, ಮತ್ತೊಂದು ಸಭೆಗೆ ದಿನಾಂಕ ನಿಗದಿಯಾಗಿಲ್ಲ.
ಈ ಸಭೆಯಲ್ಲಿ ಲೇಹ್ ಮೂಲದ 14 ಕಾರ್ಪ್ಸ್ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಭಾರತದ ಪರವಾಗಿ ಭಾಗವಹಿಸಿದ್ದು, ಇವರೊಂದಿಗೆ ಲೆಫ್ಟಿನೆಂಟ್ ಜನರಲ್ ಪಿಜಿಕೆ ಸಿಂಗ್ ಹಾಗೂ ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಇದು ಚೀನಾ ಹಾಗೂ ಭಾರತದ ನಡುವಿನ ಕಮಾಂಡರ್ ಹಂತದ 6ನೇ ಸಭೆಯಾಗಿದ್ದು, ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2ರಂದು ಸಭೆಗಳು ನಡೆದಿದ್ದವು.
ಮತ್ತೊಂದೆಡೆ ಭಾರತ ಪೂರ್ವ ಲಡಾಖ್ ಗಡಿಯ ಕೆಲವೆಡೆ ಕ್ಯಾತೆ ತೆಗೆಯುತ್ತಿರುವ ಚೀನಿ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಕೆಲವು ಎತ್ತರದ ಪ್ರದೇಶಗಳನ್ನು ವಶಕ್ಕೆ ಪಡೆದುಕೊಂಡಿದೆ.