ಹೈದರಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾರೂ ಊಹಿಸದ ಕಾರ್ಯಗಳನ್ನ ಮಾಡುವ ದೇಶವನ್ನೇ ಅಚ್ಚರಿಗೊಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಮೊನ್ನೆ ಮೊನ್ನೆ ಜುಲೈ 3ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೇಹ್‌ಗೆ ಭೇಟಿ ನೀಡುವುದು, ಹೆಲಿಕಾಪ್ಟರ್‌ನಿಂದ ಇಳಿಯುವುದು, ಗಾಯಗೊಂಡ ಸೈನಿಕರನ್ನು ಭೇಟಿ ಮಾಡುವುದು, ಬ್ರೀಫಿಂಗ್‌ಗಳಿಗೆ ಹಾಜರಾಗುವುದು ಮತ್ತು ಯೋಧರನ್ನ ಉತ್ತೇಜಿಸುವ ಭಾಷಣ ಇವೇ ಮುಂತಾದ ಫೋಟೋಗಳು ಟಿವಿಗಳ ಪರದೆಗಳ ಮೇಲೆ ಮಿಂಚಿದ್ದು ಸಹ ಅಚ್ಚರಿಯ ಬೆಳವಣಿಗೆಗಳಿಗಿಂತ ಭಿನ್ನವಾಗಿರಲಿಲ್ಲ.
ಪೂರ್ವ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಿ ಸೇನೆಗಳ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ಭೇಟಿ ಹಲವಾರು ಕಾರಣಗಳಿಂದಾಗಿ ಬಹಳಷ್ಟು ಗಮನಾರ್ಹವಾಗಿದೆ. ಸಂಘರ್ಷದ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿ ಬಿಕ್ಕಟ್ಟಿನ ಗಂಭೀರತೆ ಬಗ್ಗೆ ಅರಿತಿರುವ ಸರ್ಕಾರ ಹೆಚ್ಚು ಒತ್ತು ಕೊಡುತ್ತಿರುವುದು ಸ್ಪಷ್ಟವಾಗಿದೆ. ಗಡಿ ವಿವಾದವನ್ನ ಸರ್ಕಾರ ಲಘುವಾಗಿ ಪರಿಗಣಿಸಿದ ಹಾಗೆ ಕಾಣುತ್ತಿದೆ. ಮಿಲಿಟರಿ ಮಟ್ಟದ ಮಾತುಕತೆ ಮೂಲಕ ಒಂದು ನಿರ್ಣಯ ಹೊರ ಬೀಳಬಹುದು ಎಂಬ ಮಾತು ಕೇಳಿ ಬರುತ್ತಿದ್ದವು. ಆದರೆ, ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ರಕ್ತ ಸಿಕ್ತ ಸಂಘರ್ಷವು ಆ ಎಲ್ಲ ನಂಬಿಕೆಗಳನ್ನ ನುಚ್ಚು ನೂರು ಮಾಡಿದೆ.
ಪ್ರಸ್ತುತ ಚೀನಾ ಕೈಗೊಳ್ಳುತ್ತಿರುವ ಹಲವು ಕ್ರಮಗಳು ಈ ಹಿಂದೆ ಎರಡೂ ದೇಶಗಳು ಪರಸ್ಪರ ತೃಪ್ತಿಗೆ ಶಾಂತಿಯುತವಾಗಿ ಗಡಿ ಸಂಘರ್ಷವನ್ನ ಪರಿಹರಿಸಿಕೊಳ್ಳಬೇಕೆಂದು ಮಾಡಿಕೊಂಡಿದ್ದ ಹಿಂದಿನ ನಿಲುವುಗಳಿಗಿಂತ ಸಂಪೂರ್ಣ ಭಿನ್ನವಾಗಿವೆ ಎಂದು ಸ್ಪಷ್ಟವಾಗಿ ನಾನು ಭಾವಿಸುತ್ತೇನೆ. ಕಳೆದ ಎರಡು ತಿಂಗಳುಗಳಿಂದ, ಚೀನಾದ ವಿದೇಶಾಂಗ ಸಚಿವಾಲಯವು "ಸಾಧ್ಯವಾದಷ್ಟು ಬೇಗ ಗಡಿಯಲ್ಲಿ ನೆಲೆಯಾಗಿರುವ ಸೇನೆ ಹಿಂಪಡೆದು ಉದ್ವಿಗ್ನತೆಯನ್ನು ತಗ್ಗಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ" ಬಗ್ಗೆ ಮಾತನಾಡುತ್ತಿದೆ. ಆದರೆ, ಹೇಗಾದರೂ ಮಾಡಿ, ಅವರು ಗಾಲ್ವಾನ್ ಕಣಿವೆಯ ಮೇಲೆ ಅಸಮರ್ಥನೀಯ ಹಕ್ಕುಗಳನ್ನು ಸಾಧಿಸಲು ಚೀನಾ ಸೇನೆ ಹಿಂಜರಿಯಲಿಲ್ಲ. ಭಾರತದ ಪ್ರದೇಶ ಎಂದು ಪರಿಗಣಿಸುವ ಪ್ರದೇಶಗಳಲ್ಲಿ ತಮ್ಮ ಮಿಲಿಟರಿ ಪಡೆಗಳನ್ನು ನಿರಂತರವಾಗಿ ಬಲಪಡಿಸುವಲ್ಲಿ ನಿರತವಾಗಿದೆ.
ಸದ್ಯ, ನಡೆಯುತ್ತಿರುವ ಮಾತುಕತೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವು ಭಾರತಕ್ಕೆ ಸ್ವೀಕಾರರ್ಹವಲ್ಲ ಎಂಬುದು ಪ್ರಧಾನಮಂತ್ರಿ ಮೋದಿಯ ಈ ಲಡಾಖ್ ಭೇಟಿಯಿಂದ ಸ್ಪಷ್ಟವಾಗಿದೆ. ಅವರ ಪ್ರವಾಸವು ಚೀನಾ ಸರ್ಕಾರದ ಕಡೆಯಿಂದ ಪ್ರತಿಕ್ರಿಯೆ ಉಂಟು ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿತ್ತು. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, "ಯಾವುದೇ ಕಡೆಯಿಂದಲೂ ಈ ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮದಲ್ಲಿ ತೊಡಗಬಾರದು" ಎಂದು ಈಗ ಹೇಳಿದ್ದಾರೆ. ಪ್ರಧಾನಿ ಮೋದಿಯ ಈ ಭೇಟಿ ಮೂಲಕ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಸ್ಥಗಿತಗೊಳ್ಳುವುದು ಸೂಕ್ತ ಎಂಬ ಸ್ಪಷ್ಟ ಸೂಚನೆ ಆಗಿದೆ.
ಲಡಾಖ್ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣ ನೇರ ಮತ್ತು ಅತ್ಯಂತ ಕಠಿಣವಾಗಿತ್ತು. ಇದು ʻಚೀನಾದ ವಿಸ್ತರಣಾವಾದʼ ಎಂದು ಕರೆದ ಅವರು, "ವಿಸ್ತರಣಾವಾದಿ ಶಕ್ತಿಗಳು ಅಳಿಸಿ ಹೋಗಿವೆ ಅಥವಾ ತಮ್ಮ ನಿರ್ಧಾರ ಹಿಂಪಡೆದಿವೆ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ" ಎಂದು ಹೇಳುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. "ದುರ್ಬಲರು ಎಂದಿಗೂ ಶಾಂತಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದು, ದೌರ್ಬಲ್ಯದ ಸ್ಥಾನದಿಂದ ಭಾರತ ಮಾತುಕತೆ ನಡೆಸುವುದಿಲ್ಲ ಎಂಬುದರ ಸಂಕೇತವಾಗಿತ್ತು.
ದೇಶದ ಜನರ ಭಾವನೆಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಜ್ಞಾಪೂರ್ವಕವಾಗಿದ್ದಾರೆ. ಚೀನಾದ ಸೈನಿಕರು ಭಾರತೀಯ ಭೂಪ್ರದೇಶದಲ್ಲಿಲ್ಲ ಎಂಬ ಅವರ ಹೇಳಿಕೆಯ ಬಗ್ಗೆ ಕೆಲವು ಟೀಕೆಗಳ ನಂತರ, ಭಾರತೀಯ ಭೂಪ್ರದೇಶಕ್ಕೆ ವಿಸ್ತರಿಸುವ ಚೀನಾದ ಪ್ರಯತ್ನಗಳಿಗೆ ಭಾರತ ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ನಾಗರಿಕರಿಗೆ ಧೈರ್ಯ ತುಂಬಲು ಅವರು ಪ್ರಯತ್ನಿಸಿದ್ದಾರೆ. ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾದ ಕಂಪನಿಗಳ ಭಾಗವಹಿಸುವಿಕೆ ಮತ್ತು ವಿದ್ಯುತ್, ಐಟಿ ಉದ್ಯಮಗಳಲ್ಲಿ ಚೀನಾ ಪಾಲ್ಗೊಳ್ಳುವಿಕೆ ಪರಿಶೀಲಿಸಿದ ಇತ್ತೀಚಿನ ಸರ್ಕಾರದ ನಿರ್ಧಾರಗಳಲ್ಲಿಯೂ ಇದು ಪ್ರತಿಫಲಿಸುತ್ತದೆ.
ಈಗಾಗಲೇ ಭಾರತದ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ಚೀನಾಗೆ ತಿಳಿಸಿದೆ. ಆದರೆ, ಇನ್ನೂ ಈ ಪ್ರಕ್ರಿಯೆಯಲ್ಲಿ ಕಲ್ಲು ಬಂಡೆಗಳ ಹಾದಿ ಇದೆ. ದುರದೃಷ್ಟವಶಾತ್, ನಮ್ಮ ಕೆಲ ದೂರದರ್ಶನ ಮಾಧ್ಯಮಗಳು ನಾವು ಈಗಾಗಲೇ ಚೀನಿಯರ ವಿರುದ್ಧ ದೊಡ್ಡ ಜಯವನ್ನು ಗಳಿಸಿದ್ದೇವೆ ಎಂದು ಬಿಂಬಿಸಲು ಹೆಚ್ಚು ಸೆನ್ಸೇಶನಲ್ ಮುಖ್ಯಾಂಶಗಳನ್ನು ನೀಡುವ ತೀವ್ರ ಸ್ಪರ್ಧೆಯಲ್ಲಿ ತೊಡಗಿವೆ. ಇದು ನಮ್ಮನ್ನು ಆಗಲೇ ತೃಪ್ತಿಯ ಭಾವಕ್ಕೆ ತಳ್ಳಬಹುದು.
ಕಟು ಸತ್ಯವೇನೆಂದರೆ, ಚೀನಾದ ಸೈನಿಕರು ನಾವು ಭಾರತೀಯ ಭೂಪ್ರದೇಶವೆಂದು ಪರಿಗಣಿಸುವ ಭೂಪ್ರದೇಶದಲ್ಲಿ ಮುಂದುವರೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾದ ಈ ವರ್ತನೆ ಈಗ ನಾವು ನಿಶ್ಚಯದಿಂದ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದ್ದಾರೆ. ಸಮಸ್ಯೆ ಉಲ್ಬಣಗೊಳ್ಳುವ ಹಂತದಲ್ಲಿ ನಾವು ಒಂದು ಹಂತ ಏರಿದ್ದೇವೆ. ಪ್ರತಿ ಹಂತವು ಅಪಾಯಗಳನ್ನು ಹೊಂದಿವೆ. ಸಂಘರ್ಷವು ಏಕಪಕ್ಷೀಯ ಸ್ಪರ್ಧೆಯಲ್ಲ. ಯಾಕೆಂದರೆ, ಎದುರಾಳಿಯು ಸಹ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾನೆ. ಆದ್ದರಿಂದ, ಎಲ್‌ಎಸಿಯಲ್ಲಿನ ಹೊಂದಿಕೊಳ್ಳುವ ನಿಲುವಿನಿಂದ ಹಿಡಿದು ನಮ್ಮ ನೀತಿಗಳ ಪ್ರತೀಕಾರ, ವ್ಯಾಪಾರ ಅಥವಾ ಸೀಮಿತ ಮಿಲಿಟರಿ ಸಂಘರ್ಷದವರೆಗೆ ಇರಬಹುದಾದ ಕೆಲವು ಚೀನಿ ಪ್ರತಿಕ್ರಿಯೆಗೆ ನಾವು ಸಿದ್ಧರಾಗಿರಬೇಕು.
ನಾವು ಸುದೀರ್ಘ ಪ್ರಯಾಣದಲ್ಲಿದ್ದೇವೆ, ಅದು ಶಕ್ತಿಯುತ ಮತ್ತು ಆಕ್ರಮಣಕಾರಿಯಾಗಿ ಕಾಣುವ ನೆರೆಹೊರೆಯವರನ್ನು ನಿಭಾಯಿಸಲು ಏಕೀಕೃತ ಮಿಲಿಟರಿ ಸಿದ್ಧತೆಗಳು ಮತ್ತು ಸರ್ಕಾರದ ಸಂಪೂರ್ಣ ಸಹಕಾರದ ಅಗತ್ಯವಿರುತ್ತದೆ. ನಮ್ಮ ನೀತಿ ನಿರ್ಧಾರಗಳು ಮತ್ತು ಭವಿಷ್ಯದ ಕಾರ್ಯ ಕ್ರಮಗಳ ಪರಿಣಾಮದ ಸ್ಪಷ್ಟ ದೃಷ್ಟಿಗೆ ನಾವು ನಮ್ಮ ನಿರ್ಧಾರಗಳನ್ನ ಮೀರಿ ಸಾಗಬೇಕು.
ಭಾರತ ಆಕಸ್ಮಿಕವಾಗಿ ನಡೆಬಹುದಾದ ಘಟನೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ, ಚೀನಾದ ನಾಯಕತ್ವವು ಅವರ ನಡವಳಿಕೆಯ ಪರಿಣಾಮಗಳ ಬಗ್ಗೆ ಆಳವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುದ್ಧಗಳ ಗೆಲುವನ್ನು ಯುದ್ಧವನ್ನು ಗೆಲ್ಲುವುದರೊಂದಿಗೆ ಸಮೀಕರಿಸುವುದು ಕಾರ್ಯತಂತ್ರದ ಚಿಂತನೆಯ ಒಂದು ದೊಡ್ಡ ಮೂರ್ಖತನವಾಗಿದೆ.
ಕ್ಯಾಥಲ್ ಜೆ. ನೋಲನ್, ದಿ ಅಲ್ಯೂರ್ ಆಫ್ ಬ್ಯಾಟಲ್ ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ, "ಒಂದು ದಿನ ಯುದ್ಧವನ್ನು ಗೆಲ್ಲುವುದು ಹೆಚ್ಚೇನೂ ಆಗುವುದಿಲ್ಲ. ನೀವು ಅಭಿಯಾನವನ್ನು ಗೆಲ್ಲಬೇಕು, ನಂತರ ವರ್ಷ, ನಂತರ ದಶಕ. ವಿಜಯವು ರಾಜಕೀಯ ಶಾಶ್ವತತೆಯನ್ನು ಪಡೆದುಕೊಳ್ಳಬೇಕು. ಅದನ್ನು ಮಾಡದಿದ್ದರೆ, ಚೇತರಿಕೆ ಮತ್ತು ಮರುಹೊಂದಿಸಲು ವಿರಾಮದ ನಂತರ, ಯುದ್ಧವು ಮುಂದುವರಿಯುತ್ತದೆ.
ಚೀನಾದ ಸೈನ್ಯವು ಪಾಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ಯುದ್ಧವನ್ನು ಗೆದ್ದಿದೆ ಎಂದು ಭಾವಿಸಬಹುದು. ಆದರೆ, ಅವರು ಭಾರತ-ಚೀನಾ ಹಗೆತನದ ಯುಗಕ್ಕೆ ನಾಂದಿ ಹಾಡಿದ್ದಾರೆ. ಅದು ಈ ಪ್ರದೇಶದಲ್ಲಿ ಗಮನಾರ್ಹ ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಬೀರುತ್ತದೆ. ಭವಿಷ್ಯದಲ್ಲಿ ಇದು ಹೇಗೆ ಆಟ ಆಡುತ್ತದೆ ಎಂಬುದು ಅನಿಶ್ಚಿತವಾಗಿದೆ. ಆದರೆ, ಅಕಾಲಿಕ ವಿಜಯವನ್ನು ಘೋಷಿಸುವುದು ಎರಡೂ ಕಡೆಯವರಿಗೆ ಮೂರ್ಖತನವಾಗಿದೆ.