15/16, ಜೂನ್ 2020ರ ಕರಾಳ ರಾತ್ರಿಯಲ್ಲಿ ಹಿಮಗಟ್ಟಿದ ತಣ್ಣನೆಯ ಗಾಲ್ವಾನ್ ಕಣಿವೆಯಲ್ಲಿ, ಭಾರತ ಮತ್ತು ಚೀನಾ ನಡುವೆ 1988ರಿಂದಲೂ ನಿರ್ಮಾಣಗೊಂಡಿದ್ದ ವಿಶ್ವಾಸ ನಿರ್ಮಾಣ ಕ್ರಮಗಳ (CBM) ಸೌಧವು ನೆಲಸಮವಾಯಿತು. ಈ ದಿನ ಒಂದು ದಶಕಕ್ಕೂ ಹೆಚ್ಚು ಕಾಲದವರೆಗೆ ದಿಗಂತದಲ್ಲಿತ್ತು.
ಇಲ್ಲಿರುವ ಮುಖ್ಯ ವಿಷಯವೇನೆಂದರೆ 1993, 1996, 2005 ಮತ್ತು 2013ರಲ್ಲಿ ನಡೆದ ನಾಲ್ಕು ಒಪ್ಪಂದಗಳ ಮೂಲಕವಾಗಿ ವಾಸ್ತವಿಕ ಗಡಿನಿಯಂತ್ರಣಾ ರೇಖೆಯ (LAC) ನಿರ್ವಹಣೆಯನ್ನು ನಿರ್ದೇಶಿಸುವ ಶಿಷ್ಟಾಚಾರ ಹಾಗೂ CBMಗಳನ್ನು ಹಾಕಿಕೊಳ್ಳಲಾಗಿದೆ. ಉಭಯ ದೇಶಗಳ ನಡುವೆ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಕುರಿತ 1993ರ ಒಪ್ಪಂದದ ಪ್ರಕಾರ ಎರಡೂ ದೇಶಗಳ ಸೇನಾಪಡೆಗಳು ಬಲ ಪ್ರಯೋಗ ಮಾಡುವುದಾಗಲಿ, ಬಲ ಪ್ರಯೋಗಿಸುವುದಾಗಿ ಬೆದರಿಕೆ ಒಡ್ಡುವುದಾಗಲಿ ಮಾಡುವಂತಿಲ್ಲ. ಹಾಗೆಯೇ ಎರಡೂ ದೇಶಗಳೂ ವಾಸ್ತವಿಕ ಗಡಿನಿಯಂತ್ರಣಾ ರೇಖೆಯನ್ನು ಗೌರವಿಸಿ, ಪಾಲಿಸಬೇಕು. 1996ರ ಒಪ್ಪಂದದ ಪ್ರಕಾರ ಎರಡೂ ದೇಶಗಳ ಪಡೆಗಳ ನಡುವೆ ವಿಶ್ವಾಸ ನಿರ್ಮಾಣ ಕ್ರಮಗಳು ಏನಾಗಿರಬೇಕೆಂದು ಚರ್ಚಿಸಿ ತೀರ್ಮಾನಿಸಲಾಗಿತ್ತು.
ಒಂದು ಕಡೆಯವರು ತಮ್ಮ ಸೈನಿಕ ಪ್ರಾಬಲ್ಯವನ್ನು ಮತ್ತೊಂದು ಕಡೆಯವರ ಮೇಲೆ ಬಳಸುವಂತಿಲ್ಲ. ಮಾತ್ರವಲ್ಲದೇ ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದನ್ನಾಗಲಿ, ಸ್ಫೋಟಕ ಕಾರ್ಯಾಚರಣೆ ನಡೆಸುವುದನ್ನಾಗಲಿ ಅಥವಾ LACಯ ಎರಡು ಕಿಲೋಮೀಟರ್ ಪರಿಧಿಯಲ್ಲಿ ಬಂದೂಕು ಅಥವಾ ಸ್ಫೋಟಕಗಳನ್ನು ಬಳಸಿ ಬೇಟೆಯಾಡುವುದನ್ನು ನಿಷಿದ್ಧವೆಂದು ಈ ಒಪ್ಪಂದ ತಿಳಿಸಿತ್ತು. 2005ರ ಶಿಷ್ಟಾಚಾರದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಕುರಿತು ಏನಾದರೂ ಭಿನ್ನಾಭಿಪ್ರಾಯ ಏರ್ಪಟ್ಟು ಎರಡು ಕಡೆಗಳ ಗಡಿ ಭದ್ರತಾ ಸಿಬ್ಬಂದಿ ಮುಖಾಮುಖಿಯಾಗುವ ಸಂದರ್ಭ ಏರ್ಪಟ್ಟಲ್ಲಿ ಇಬ್ಬರೂ ಸ್ವಯಂ ನಿಯಂತ್ರಣಕ್ಕೆ ಒಳಗಾಗತಕ್ಕದ್ದು. ಹಾಗೆಯೇ ಪರಿಸ್ಥಿತಿ ಹದಗೆಡುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪರಸ್ಪರ ಮುಖಾಮುಖಿಯಾದಲ್ಲಿ ಎರಡೂ ಕಡೆಗಳ ಸೈನಿಕರು ಆ ಪ್ರದೇಶದಲ್ಲಿ ತಮ್ಮ ಕಾರ್ಯಗಳನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಮುಂದುವರಿಯದೆ ತಂತಮ್ಮ ನೆಲೆಗಳಿಗೆ ಮರಳತಕ್ಕದ್ದು. ಮುಖಾಮುಖಿಯಾದ ಸಂದರ್ಭದಲ್ಲಿ ಯಾವ ಕಡೆಯವರೂ ಬಲ ಪ್ರಯೋಗ ನಡೆಸಕೂಡದು. ಪರಸ್ಪರ ಗೌರವದಿಂದ ನಡೆಸಿಕೊಂಡು ಯಾವುದೇ ಪ್ರಚೋದನಕಾರಿ ಕೃತ್ಯ ನಡೆಯದಂತೆ ನೋಡಿಕೊಳ್ಳಬೇಕು.
2013ರ ಭಾರತ-ಚೀನಾ ಗಡಿ ಒಪ್ಪಂದವು ಯಾರೂ ಸಹ ಎದುರಿನವರ ಮೇಲೆ ಸೇನಾ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಿಲ್ಲ ಎಂದು ಒತ್ತಿ ಹೇಳಿತ್ತಲ್ಲದೇ ಒಬ್ಬರು ಮತ್ತೊಬ್ಬರನ್ನು ಬೆದರಿಸಲಾಗಲಿ, ದಾಳಿ ನಡೆಸಲಾಗಲಿ ಸೇನಾ ಬಲಗಳನ್ನು ಬಳಸಿಕೊಳ್ಳುವಂತಿಲ್ಲ ಎಂದೂ ಹೇಳಿತ್ತು. ಹಲವಾರು ವರ್ಷಗಳಲ್ಲಿ ನಡೆದ ಮುಖಾಮುಖಿ ಸಂಘರ್ಷಗಳ ಅನುಭವದ ಆಧಾರದಲ್ಲಿ, LAC ಯಾವುದೆಂದು ಸ್ಪಷ್ಟವಿರದ ಜಾಗದಲ್ಲಿ ಎರಡು ಕಡೆಗಳು ಪರಸ್ಪರರ ಗಸ್ತುಗಳನ್ನು ಹಿಂಬಾಲಿಸುವಂತಿಲ್ಲ ಎಂಬ ಕೇವಿಯಟ್ ಸಹ ಹಾಕಿಕೊಳ್ಳಲಾಗಿತ್ತು. ಗರಿಷ್ಠ ಮಟ್ಟದಲ್ಲಿ ಸ್ವಯಂ ನಿಯಂತ್ರಣ ಹೊಂದುವ, ಯಾವುದೇ ಪ್ರಚೋದನಕಾರಿ ಕೃತ್ಯಕ್ಕೆ ಒಳಗಾಗದಂತೆ ಇರುವ ಹಾಗೂ ಒಬ್ಬರನ್ನೊಬ್ಬರು ಗೌರವಾದರದಿಂದ ನೋಡುವ ಕುರಿತು ಹಾಗೂ ಪರಸ್ಪರ ಗುಂಡಿನ ದಾಳಿಯನ್ನು ಅಥವಾ ಸಶಶ್ತ್ರ ಸಂಘರ್ಷವನ್ನು ತಡೆಯುವಂತೆ ಈ ಒಪ್ಪಂದದಲ್ಲಿಯೂ ಹೇಳಲಾಗಿತ್ತು.
1996 ಮತ್ತು 2005ರ ಒಪ್ಪಂದಗಳ ಪರಿಣಾಮವಾಗಿ ಮುಖಾಮುಖಿ ಚಕಮಕಿಗಳ ಗಸ್ತು ತಿರುಗಾಟಗಳ ಕುರಿತಂತೆ ಕಾರ್ಯೋನ್ಮುಖ ಶಿಷ್ಟಾಚಾರಗಳು ರೂಪುಗೊಂಡವು. ಬ್ಯಾನರ್ ಕವಾಯತು ನಡೆಸುವಂತಹ ವಿಷಯಗಳು ಉಭಯತ್ರರ ನಡುವೆ ಚರ್ಚೆಯಾಗಿದ್ದಲ್ಲದೇ ನಿಗದಿತ ಜಾಗದಲ್ಲಿ ಗಡಿ ಸಿಬ್ಬಂದಿ ಸಭೆಗಳು ((BPMs) ಸಹ ನಡೆಯುತ್ತಿದ್ದವು. ನಿಜ ಹೇಳಬೇಕೆಂದರೆ ಸಾಕಷ್ಟು ಮುಖಾಮುಖಿಗಳಲ್ಲಿ ಈ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಅಂತಹ ಸಂದರ್ಭಗಳಲ್ಲೆಲ್ಲಾ ಸೇನಾಪಡೆಗಳು ತಮ್ಮನ್ನು ತಾವು ನಿಯಂತ್ರಿಸಿಕೊಂಡು ತಮ್ಮ ತಮ್ಮ ನೆಲೆಗಳಿಗೆ ಮರಳಿದ್ದವು. ಆಗಾಗ ತಿಕ್ಕಾಟಗಳೂ ನಡೆಯುತ್ತಿದ್ದವು. ನಂತರ ಗಡಿ ಸಿಬ್ಬಂದಿ ಸಭೆಗಳಲ್ಲಿ ಇವು ಚರ್ಚೆಯಾಗುತ್ತಿದ್ದವು. ಪಡೆಗಳು ಯಾವಾಗಲೂ ಆಯುಧಗಳನ್ನು ಇಟ್ಟುಕೊಳ್ಳುತ್ತಿದ್ದರಾದರೂ ಸುರಕ್ಷಿತ ಮೋಡ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು. ಸೂಕ್ತ ಸೇನಾ ಕವಾಯತುಗಳನ್ನು ಸಹ ನಡೆಸಲಾಗುತ್ತಿತ್ತು.
ಕಳೆದ ಎಂಟು ವರ್ಷಗಳಲ್ಲಿ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ಹಲವಾರು ಘಟನೆಗಳು ನಡೆದಿವೆ. ರಾಕಿ ನಲ್ಲಾ, ಚುಮಾರ್, ಪಾಂಗಾಂಗ್ ಟ್ಸೊ, ಡೆಮ್ಚಾಕ್ ಮತ್ತು ಡೋಕ್ಲಾಮ್ ಗಳಲ್ಲಿ ಇಂತಹ ಘಟನೆಗಳು ನಡೆದಿರುವುದನ್ನು ನೋಡಬಹುದು. ಶಿಷ್ಟಾಚಾರ ಜಾರಿಯಲ್ಲಿದ್ದಾಗಲೂ ಚೀನಾದ ಪಡೆಗಳು ಹಿಂದಕ್ಕೆ ಸರಿಯಲು ನಿರಾಕರಿಸಿದಾಗಲೆಲ್ಲಾ ಇಂತಹ ತಿಕ್ಕಾಟಗಳು ದೀರ್ಘ ಸಮಯದವರೆಗೆ ಮುಂದುವರಿದಿದ್ದಿದೆ. ಉಭಯ ದೇಶಗಳು ಸೇರಿ ಮಾಡಿಕೊಂಡಿದ್ದ ಶಿಷ್ಟಾಚಾರಗಳು ಕ್ರಮೇಣ ದುರ್ಬಲಗೊಂಡಿದ್ದಕ್ಕೆ ಇದು ಸಾಕ್ಷಿಯಾಗಿದೆ.
ಪೂರ್ವ ಲಡಾಖ್ನ ಪಾಂಗಾಂಗ್ ಟ್ಸೊ, ಗಾಲ್ವಾನ್ ಕಣಿವೆ ಮತ್ತು ಗೋಗ್ರಾ ಬಿಸಿನೀರಿನ ಬುಗ್ಗೆಗಳ ಪ್ರದೇಶದಲ್ಲಿ ನಡೆದ ಇತ್ತೀಚಿನ ಘಟನೆಗಳು ಎಲ್ಲಾ ಶಿಷ್ಟಾಚಾರಗಳು ಹಾಗೂ ಸಿಬಿಎಂಗಳು ವಿಫಲವಾಗಿರುವುದನ್ನು ತೋರಿಸುತ್ತವೆ. ಮೊದಲು ಪಾಂಗಾಂಗ್ ಟ್ಸೊನಲ್ಲಿ, ನಂತರ ಜೂನ್ 15/16ರಂದು ಗಾಲ್ವಾನ್ ನಲ್ಲಿ ಚೀನೀ ಪಡೆಗಳು ಅತ್ಯಂತ ಬರ್ಬರತೆಯನ್ನು ಹಾಗೂ ಕ್ರೌರ್ಯವನ್ನು ಮೆರೆದಿವೆ. ಈ ಘಟನೆಗಳಲ್ಲಿ ಅವರು ಮೊಳೆ ಜೋಡಿಸಿದ ಬಡಿಗೆಗಳು, ಮುಳ್ಳು ತಂತಿಯ ರಾಡುಗಳಂತಹ ಮಧ್ಯಯುಗೀನ ಕಾಲದ ಆಯುಧಗಳಿಂದ ಭಾರತದ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಇದುವರೆಗಿನ ಎಲ್ಲಾ ಒಪ್ಪಂದ ಹಾಗೂ ಶಿಷ್ಟಾಚಾರಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇಂತಹ ಆಯುಧಗಳನ್ನು ಸೇನಾಪಡೆಗಳು ಇಟ್ಟುಕೊಂಡಿದ್ದರು ಎಂದರೆ ಇದು ಪೂರ್ವನಿಯೋಜಿತ ಹಲ್ಲೆಯೇ ಆಗಿದೆ. ಜೂನ್ 15, 2020ರಂದು ಚೀನೀ ಪಡೆಗಳ ಹಿಂಸಾಚಾರದಿಂದಾಗಿ ಭಾರತೀಯ ಸೇನೆಯು ತನ್ನ 20 ಧೀರ ಯೋಧರನ್ನು ಕಳೆದುಕೊಂಡಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ನಿರ್ವಹಣೆಯನ್ನು ಪುನರ್ ಪರಿಶೀಲಿಸಲು ನಡೆಸಲು ಇದು ಸಕಾಲವಾಗಿದೆ. 1988 ಮತ್ತು 2005ರ ನಡುವೆ ಜಂಟಿ ಕ್ರಿಯಾ ಗುಂಪಿನ 15 ಸಭೆಗಳು ನಡೆದಿವೆ. ಅದಾದ ನಂತರ 22 ವಿಶೇಷ ಪ್ರತಿನಿಧಿಗಳ ಸಭೆಗಳು ಜರುಗಿವೆ. ಇಷ್ಟೆಲ್ಲಾ ಆಗಿದ್ದರೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಗುರುತಿಸುವಲ್ಲಿ ಯಾವುದೇ ಪ್ರಗತಿ ಕಂಡು ಬರಲಿಲ್ಲ. ಈ ವಿಷಯದಲ್ಲಿ ಯಾವುದೇ ಪ್ರಗತಿ ಕಾಣುವುದು ಚೀನಾದವರಿಗೆ ಬೇಕಾಗಿಯೇ ಇಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ ಚೀನೀಯರು ಅತ್ಯಂತ ನಂಬಲನರ್ಹರೆಂದು ಸಾಬೀತು ಮಾಡಿರುವುದೇ ಅಲ್ಲದೇ ಹೆಚ್ಚುವರಿ ಗಡಿಯನ್ನು ಆಕ್ರಮಿಸಿಕೊಳ್ಳಲು ಕ್ರಮೇಣವಾಗಿ ಒತ್ತುವರಿ ನಡೆಸುತ್ತಲೇ ಇರುತ್ತಾರಲ್ಲದೇ ನಂತರವೂ ತೆರವುಗೊಳಿಸುವುದಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗಿದ್ದಾಗ ಅವರು ಬಲ ಪ್ರಯೋಗಿಸಲೂ ಹಿಂಜರಿಯುವುದಿಲ್ಲ. ಚೀನೀಯರ ಕುರಿತಾಗಿ ಗಣನೀಯ ಮಟ್ಟದಲ್ಲಿ ವಿಶ್ವಾಸ ಕೊರತೆಯೂ ಇರುತ್ತದೆ.
ಸಂಭಾವ್ಯ ದಾಳಿಗಳ ವಿರುದ್ಧವಾಗಿ ತಮ್ಮನ್ನು ತಾವು ಅಥವಾ ತಮ್ಮ ತುಕಡಿಗಳನ್ನು ರಕ್ಷಿಸಿಕೊಳ್ಳಲು ಸೈನಿಕರಿಗೆ ಆತ್ಮರಕ್ಷಣಾ ಹಕ್ಕು ಇರುತ್ತದೆ ಎಂಬುದನ್ನು ಗುರುತಿಸಿಕೊಳ್ಳುವುದು ಅವಶ್ಯ. ಇದನ್ನು ವ್ಯಕ್ತಿ ಅಥವಾ ತುಕಡಿಯ ಆತ್ಮ ರಕ್ಷಣಾ ಹಕ್ಕು ಎಂದು ಕರೆಯಲಾಗುತ್ತದೆ. ಇದನ್ನು ಚಲಾಯಿಸಿ ಯಾವುದೇ ದಾಳಿ ನಡೆದ ಸಂದರ್ಭದಲ್ಲಿ ಸೈನಿಕರು ತಮ್ಮನ್ನು ತಾವು ಉಳಿಸಿಕೊಳ್ಳಬಹುದಾಗಿದೆ. ಬಲ ಪ್ರಯೋಗಿಸಲು ಇರುವ ಮಿತಿಗಳ ಹೊರತಾಗಿಯೂ ಈ ಹಕ್ಕು ಸೈನಿಕರಿಗೆ ಇದ್ದೇ ಇರುತ್ತದೆ. ಚೀನೀಯರು ನಡೆಸಿರುವ ದಾಳಿಯ ಸ್ವರೂಪದ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಸೇನಾಪಡೆಗಳ ನಿರ್ವಹಣೆಯ ಕುರಿತ ನಿಯಮಗಳನ್ನು ಭಾರತೀಯ ಸೈನಿಕರ ಪರವಾಗಿ ತಿದ್ದುಪಡಿ ಮಾಡಬೇಕಿದೆ. ಅಗತ್ಯ ಬಂದಲ್ಲಿ ರಕ್ಷಣಾತ್ಮಕವಾಗಿ ಸೇನಾ ಪಡೆಗಳನ್ನು ನಿಯೋಜಿಸಲು, ಶಸ್ತ್ರಗಳನ್ನು ಬಳಸಲು ಮತ್ತು ಸೈನಿಕರು ತಮ್ಮನ್ನು ತಮ್ಮ ಸೇನಾ ತುಕಡಿಯನ್ನು ರಕ್ಷಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ಈ ತಿದ್ದುಪಡಿ ಇರಬೇಕಾಗಿದೆ. ಹಾಗೆಯೇ ಚೀನೀಯರು ಹಲ್ಲೆ ನಡಸಲು ಬಳಸಿರುವಂತಹ ಮಧ್ಯಕಾಲೀನ ಹತಾರಗಳನ್ನು ಯಾವುದೇ ಸೈನಿಕರು ಬಳಸುವಂತಿಲ್ಲ ಎಂದೂ ತೀರ್ಮಾನವಾಗಬೇಕಿದೆ. ಸೈನಿಕರು ತರಬೇತುಗೊಂಡಿರುವುದು ಈ ರೀತಿಯಲ್ಲಿ ಅಲ್ಲ.
ಪ್ರತಿಯೊಬ್ಬ ಸೈನಿಕನ ಜೀವವೂ ಈ ದೇಶದಕ್ಕೆ ಅತ್ಯಮೂಲ್ಯವಾಗಿರುತ್ತದೆ. ಶಿಷ್ಟಾಚಾರ ಮತ್ತು ಸಿಬಿಎಂಗಳನ್ನು ಅನುಸರಿಸುವ ನೆಪದಲ್ಲಿ ಸೈನಿಕರು ಕೈಕಟ್ಟಿಕೊಂಡು ಗಡಿಯಲ್ಲಿ ಗಡಿರಕ್ಷಣೆ ಮಾಡುವುದಕ್ಕೆ ದೇಶ ಬಿಡುವುದಿಲ್ಲ. ಆದಷ್ಟು ಬೇಗ ಹೊಸ ನಿಯಮಗಳು ಜಾರಿಗೆ ಬರಲಿ.