ನವದೆಹಲಿ: ಸಾವಿರಾರು ಕೋಟಿ ರೂ. ವಂಚಿಸಿ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ರಾಜಕೀಯ ಆಶ್ರಯ ಮನವಿಯನ್ನು ಪರಿಗಣಿಸದಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಪತ್ರ ಬರೆದಿದೆ.
ಕಳೆದ ವಾರ ಬ್ರಿಟನ್ ಸರ್ಕಾರವು ಮಲ್ಯ ಅವರನ್ನು ಶೀಘ್ರದಲ್ಲಿ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಅವರನ್ನು ಹಸ್ತಾಂತರಿಸುವ ಮೊದಲು ಕೆಲವು ಕಾನೂನು ತೊಡಕುಗಳಿವೆ ಅದನ್ನು ಬಗೆಹರಿಸಬೇಕಿದೆ ಎಂದು ಹೇಳಿತ್ತು.
ಮಲ್ಯ ಅವರು ಯುಕೆಗೆ ಪರಾರಿಯಾದಾಗಿನಿಂದ ನಾವು ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಯಾವುದೇ ಕೋರಿಕೆಗಳನ್ನು ಪರಿಗಣಿಸದಂತೆ ಅಲ್ಲಿನ ಸರ್ಕಾರಕ್ಕೆ ವಿನಂತಿಸುತ್ತಿದ್ದೇವೆ. ಭಾರತದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಮತ್ತು ಇಲ್ಲಿ ಕಿರುಕುಳ ನೀಡಲಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.