ಹೈದ್ರಾಬಾದ್: ಪಶು ಸಂಗೋಪನೆ/ಹೈನು ಮತ್ತು ಕೃಷಿ- ಇವೆರಡೂ ರೈತರ ಎರಡು ಕಣ್ಣುಗಳಿದ್ದಂತೆ. ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರ್ಯಾಯವಾಗಿ ಕೃಷಿ ಉತ್ಪನ್ನಗಳಿಂದ ಬರುವ ಆದಾಯ ತುಂಬಿಕೊಡುತ್ತವೆ. ಹೈನು ಹೊಂದಿರುವ ರೈತ ಭಯಪಡಬೇಕಾದ ಅವಶ್ಯಕತೆಯೇ ಇಲ್ಲ ಎಂಬ ಮಾತೇ ಇದೆ. ಬೆಳೆಗಳು ಸರಿಯಾಗಿ ಬಾರದಿದ್ದರೂ, ಹಸು, ಎಮ್ಮೆಗಳು ಮತ್ತು ಹೈನು ಪ್ರಾಣಿಗಳನ್ನು ಹೊಂದಿರುವ ರೈತನ ದಿನಕ್ಕೆ ಮೂರು ಹೊತ್ತಿನ ಊಟಕ್ಕೆ ಮೋಸವಿಲ್ಲ.
ದುರದೃಷ್ಟವಶಾತ್, ಹಲವಾರು ಕಾರಣಗಳಿಂದಾಗಿ ಹೈನುಗಾರಿಕೆ ಚಟುವಟಿಕೆಗಳಿಂದ ದೂರವಾಗುವ ಮೂಲಕ ರೈತನು ಆರ್ಥಿಕವಾಗಿ ತೊಂದರೆ ಎದುರಿಸತೊಡಗಿದ್ದಾನೆ. ಇನ್ನೊಂದೆಡೆ ಕಬ್ಬು ಬೆಳೆಗಾರರಿಗೆ ಸೂಕ್ತ ಪ್ರೋತ್ಸಾಹ ಯೋಜನೆಗಳ ಕೊರತೆಯಿಂದಾಗಿ ಸಕ್ಕರೆ ಉದ್ಯಮ ಸಂಕಷ್ಟಕ್ಕೆ ಸಿಲುಕತೊಡಗಿದೆ. ಜಗತ್ತಿನಲ್ಲಿಯೇ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದ ಹೈನೋದ್ಯಮಕ್ಕೂ ಇದೇ ಗತಿ ಬರಬಹುದೆ ಎಂಬ ಪ್ರಶ್ನೆಗಳು ತಲೆಯೆತ್ತಿವೆ. ಉತ್ತೇಜಕ ಕ್ರಮಗಳ ಕೊರತೆ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡದ ನಿರ್ಲಕ್ಷ್ಯ, ಹೈನೋದ್ಯಮದಲ್ಲಿರುವ ಅನಾರೋಗ್ಯಕರ ಸ್ಪರ್ಧೆ, ಹಾಲು ಉತ್ಪಾದನೆ ಹಾಗೂ ಬೆಲೆ ನಿಗದಿಯಲ್ಲಿರುವ ಅಸ್ಥಿರತೆ, ಹೆಚ್ಚುತ್ತಿರುವ ವಿದೇಶಿ ಆಮದಿನಂತಹ ಸವಾಲುಗಳನ್ನು ದೇಶದ ಹೈನೋದ್ಯಮ ಇಂದು ಎದುರಿಸುತ್ತಿದೆ.
ಭಾರತದ ಹಾಲು ಉತ್ಪಾದನೆ | |
ವರ್ಷ | ಉತ್ಪಾದನೆ (In cr.tonnes) |
2000-01 | 8.06 |
2005-06 | 9.71 |
2010-11 | 12.18 |
2015-16 | 15.55 |
2016-17 | 16.54 |
2017-18 | 17.63 |
2018-19 | 18.77 |
ಮೂಲ: ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಭಾರತ ಸರಕಾರ |
ಬೆಲೆ ಸ್ಥಿರತೆಯ ಭರವಸೆ:
ದೇಶದ ವಿವಿಧ ಭಾಗಗಳಲ್ಲಿರುವ ಹೆಚ್ಚಿನ ಉಷ್ಣಾಂಶ, ತಡವಾದ ಮುಂಗಾರು ಮಳೆ ಮತ್ತು ನೀರಿನ ಲಭ್ಯತೆಯ ಕೊರತೆ ಕಾರಣಗಳು ಒಂದೆಡೆಯಾದರೆ, ಪ್ರವಾಹದ ಕಾರಣದಿಂದಾಗಿ ಹಲವಾರು ರಾಜ್ಯಗಳಲ್ಲಿ ಹೈನು ಪ್ರಾಣಿಗಳ ಆರೋಗ್ಯ, ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಇದರ ಜೊತೆಗೆ, ದುಬಾರಿಯಾಗಿರುವ ಪಶು ಆಹಾರ ಹಾಗೂ ಹಸಿರು ಹುಲ್ಲಿನ ಅಲಭ್ಯತೆಯ ಕಾರಣಗಳೂ ಸೇರಿಕೊಂಡಿವೆ. ಇದರ ಪರಿಣಾಮವಾಗಿ, ಹಾಲು ಉತ್ಪಾದನೆ ಇಳಿಕೆಯಾಗತೊಡಗಿದೆ.
ಸಮೀಕ್ಷೆಯೊಂದರ ವರದಿಯ ಪ್ರಕಾರ, ಸದ್ಯದ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದ್ದು, ಡಿಸೆಂಬರ್ ವೇಳೆಗೆ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ಮುಂಗಾರು ಹಂಗಾಮಿನ ಕೊನೆಗೆ ಸಾಕಷ್ಟು ಮಳೆಯಾಗಿದ್ದೇ ಈ ಆಶಾವಾದಕ್ಕೆ ಕಾರಣ. ದೇಶದ ವಿವಿಧೆಡೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಜನವರಿ ತಿಂಗಳ ಅವಧಿಯಲ್ಲಿ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಶೇಕಡಾ ೪೧ರಷ್ಟಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಇದು ಅತ್ಯಧಿಕ ಎಂದು ಸಹ ವರದಿ ಹೇಳಿದೆ. ಹೀಗಾಗಿ ಹಿಂಗಾರು ಬೆಳೆಗಳ ಇಳುವರಿ ಹೆಚ್ಚುವ ಸಾಧ್ಯತೆಗಳಿದ್ದು, ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮಗಳಿಗೆ ದೊಡ್ಡ ಪ್ರಮಾಣದ ಹಸಿರು ಆಹಾರ ಲಭ್ಯವಾಗಲಿದೆ. ಇದರಿಂದಾಗಿ ಹಾಲು ಉತ್ಪಾದನೆ ಬೆಲೆ ಕೂಡಾ ಸ್ಥಿರವಾಗುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು ಎಂಬ ಆಶಾವಾದವನ್ನು ವರದಿ ವ್ಯಕ್ತಪಡಿಸಿದೆ.
ಅಮುಲ್ ಮತ್ತು ಮದರ್ ಡೇರಿಯಂತಹ ಖಾಸಗಿ ಹಾಲು ಉತ್ಪಾದಕ ಸಂಸ್ಥೆಗಳು ಸಗಟು ಹಾಲು ಮಾರಾಟ ದರವನ್ನು ಲೀಟರಿಗೆ ಕ್ರಮವಾಗಿ ರೂ. 2 ಮತ್ತು ರೂ. 5 ಹೆಚ್ಚಳ ಮಾಡಿದ್ದ ಹಿನ್ನೆಲೆಯಲ್ಲಿ, ಅವುಗಳೊಂದಿಗೆ ಸ್ಪರ್ಧಿಸುವ ಉದ್ದೇಶದಿಂದ ಹಾಲಿನ ಬೆಲೆ ಹೆಚ್ಚಿಸಲು ದೇಶದ ಹೈನು ಉತ್ಪಾದಕ ಸಂಸ್ಥೆಗಳು ಕಳೆದ ವರ್ಷ ಸ್ಪರ್ಧೆಯನ್ನೇ ನಡೆಸಿದ್ದವು. ಈ ವರ್ಷದ ಜನವರಿ ತಿಂಗಳ ಅಂತ್ಯದೊಳಗೆ, ಬಹುತೇಕ ಖಾಸಗಿ ಹೈನು ಸಂಸ್ಥೆಗಳು ಹಾಲಿನ ಗರಿಷ್ಠ ಮಾರಾಟ ಬೆಲೆಯನ್ನು ಲೀಟರಿಗೆ ರೂ. ೫ರಂತೆ ಎರಡು ಸಲ ಹೆಚ್ಚಿಸಿವೆ. ಬೆಲೆಗಳನ್ನು ಏರಿಸಿರುವುದು ಉತ್ಪಾದಕ ರೈತರು ತಮ್ಮ ಆರ್ಥಿಕ ಸ್ಥಿರತೆಯನ್ನು ಮತ್ತೆ ಗಳಿಸಿಕೊಳ್ಳುವಂತಾಗಲಿ ಎಂಬ ಉದ್ದೇಶದಿಂದಲೇ ಹೊರತು ಗ್ರಾಹಕರಿಗೆ ಹೆಚ್ಚಿನ ಹೊರೆ ಹೊರಿಸಲು ಅಲ್ಲ ಎಂದು ಹಲವಾರು ಖಾಸಗಿ ಹೈನು ಸಂಸ್ಥೆಗಳು ಡಿಸೆಂಬರ್‌ನಲ್ಲಿ ಸಮರ್ಥನೆ ಕೂಡಾ ನೀಡಿದ್ದವು. ಹೀಗಿದ್ದರೂ, ಈ ವರ್ಷದ ಜನವರಿಯಲ್ಲಿ ಬೆಲೆಯನ್ನು ಮತ್ತೆ ಹೆಚ್ಚಿಸಲಾಯಿತು. ಹಲವಾರು ಸಹಕಾರಿ ಹೈನುಗಾರಿಕಾ ಸಂಸ್ಥೆಗಳಲ್ಲಿ ಮಾರಾಟ ಕುಸಿದಿದ್ದರಿಂದಾಗಿ ಈ ಬೆಲೆ ಏರಿಕೆ ಎಂಬ ಕಾರಣವನ್ನೂ ನೀಡಲಾಯಿತು. ಆದರೆ, ಹಾಲಿನ ಬೆಲೆಯನ್ನು ಹೀಗೆ ಪದೇ ಪದೇ ಏರಿಸುತ್ತಿದ್ದರೂ ಕೂಡಾ, ಹಾಲು ಖರೀದಿ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ಬೆಲೆ ಹೆಚ್ಚಳದಿಂದ ರೈತರಿಗೆ ಯಾವುದೇ ಲಾಭ ಸಿಕ್ಕಿಲ್ಲ. ಪಶು ಆಹಾರ ಮತ್ತು ಹುಲ್ಲಿನ ಬೆಲೆ ಹೆಚ್ಚಳವಾಗಿರುವುದು ಕೂಡಾ ಹೈನು ಉತ್ಪಾದಕ ರೈತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಲು ಕಾರಣವಾಗಿವೆ.
ತಮಗೆ ಹಾಲು ನೀಡುತ್ತಿರುವ ರೈತರಿಗೆ ಉತ್ತಮ ಬೆಲೆ ನೀಡಬೇಕೆಂಬ ಅಂಶದತ್ತ ಸ್ಪರ್ಧೆ ಎದುರಿಸುತ್ತಿರುವ ಖಾಸಗಿ ಹೈನುಗಾರಿಕಾ ಕಂಪನಿಗಳು ಗಮನ ಹರಿಸುತ್ತಿಲ್ಲ. ಹೀಗಿದ್ದಾಗ್ಯೂ, ಹಾಲು ಉತ್ಪಾದನೆ ಕುಸಿದಾಗ ಈ ಕಂಪನಿಗಳು ನಿರಂತರವಾಗಿ ಬೆಲೆ ಏರಿಸುತ್ತ ಗ್ರಾಹಕರ ಮೇಲೆಯೇ ಹೊರೆ ಹೊರಿಸುತ್ತಿವೆ. ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವಿಜಯ ಡೇರಿಯು ಡಿಸೆಂಬರ್ ಮತ್ತು ಜನವರಿಯಲ್ಲಿ ಹಾಲಿನ ಬೆಲೆಯನ್ನು ಲೀಟರ್‌ಗೆ ಕ್ರಮವಾಗಿ ರೂ.2 ಮತ್ತು ರೂ. 3ರಷ್ಟು ಏರಿಸಿದೆ. ಅಂದರೆ, ಒಂದು ಲೀಟರ್ ಹಾಲಿನ ಬೆಲೆ ರೂ. 47ತಲುಪಿದೆ. ಆದರೆ, ಹಾಲಿನ ಖರೀದಿ ಮತ್ತು ಮಾರಾಟದ ನಡುವಿನ ವ್ಯತ್ಯಾಸ ಲೀಟರಿಗೆ ಕೇವಲ ರೂ.1 ಆಗಿದ್ದರಿಂದ, ವಿಜಯ ಡೇರಿಯ ಹಾಲು ಮಾರಾಟ ಪ್ರಮಾಣ 3.12ಲಕ್ಷದಿಂದ 2.50 ಲಕ್ಷ ಲೀಟರುಗಳಿಗೆ ಇಳಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಇತರ ಹಾಲು ಉತ್ಪಾದಕ ಸಂಸ್ಥೆಗಳ ಮಾರಾಟ ಪ್ರಮಾಣ 37 ಲಕ್ಷ ಲೀಟರ್‌ಗಳು ಎಂಬ ಅಂಶ ಇಲ್ಲಿ ಗಮನಾರ್ಹ. ಈ ಪರಿಸ್ಥಿತಿ ಬೇಸಿಗೆ ಕಾಲದಲ್ಲಿ ಇನ್ನಷ್ಟು ವಿಷಮಿಸುವ ಸಾಧ್ಯತೆಗಳಿವೆ. ಹಾಲಿನ ಪುಡಿ ಸಂಗ್ರಹ ಕೂಡಾ ಸೀಮಿತ ಪ್ರಮಾಣದಲ್ಲಿದೆ ಎಂಬುದು ಕಳವಳ ಮೂಡಿಸಿರುವ ಅಂಶ. ಹೈನುಗಾರಿಕೆಗೆ ಸೂಕ್ತ ಸೌಲಭ್ಯಗಳು, ಲೀಟರ್ ಹಾಲಿಗೆ ರೂ. 4 ಬೆಂಬಲ ಬೆಲೆ, ಅಂದಾಜು 65,000ರಾಸುಗಳನ್ನು ಸಹಾಯಧನದ ಮೂಲಕ ಒದಗಿಸುವಂತಹ ಉತ್ತೇಜಕ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದರು ಕೂಡಾ, ವಿಜಯ ಡೇರಿಯ ಸುತ್ತಮುತ್ತಲಿನ ಹಾಲು ಸಂಗ್ರಹ ಸಾಮರ್ಥ್ಯ ನಿರೀಕ್ಷಿಸಿದ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲದಿರುವುದು ಪರಿಸ್ಥಿತಿಯ ತೀವ್ರತೆಗೆ ನಿದರ್ಶನ.
ಸದ್ಯ ದೇಶಾದ್ಯಂತ ನಿತ್ಯ 50 ಕೋಟಿ ಹಾಲು ಉತ್ಪಾದನೆಯಾಗುತ್ತಿದ್ದರೂ, ಇನ್ನೂ 50 ಲಕ್ಷ ಲೀಟರ್ ಹಾಲಿನ ಕೊರತೆಯಿದೆ. ಬೇಡಿಕೆ ಪೂರೈಸಲು ವಿದೇಶಗಳಿಂದ ಹಾಲಿನ ಪುಡಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೆಲವು ಕಂಪನಿಗಳು ಸರಕಾರಕ್ಕೆ ವಿನಂತಿ ಸಹ ಮಾಡಿಕೊಂಡಿವೆ. ಅದಾಗ್ಯೂ, ಅಮುಲ್ ಮತ್ತು ಕೆಎಂಎಫ್‌ನಂತಹ ಬೃಹತ್ ಹೈನೋದ್ಯಮ ಸಂಸ್ಥೆಗಳು ಈ ಪ್ರಸ್ತಾಪವನ್ನು ವಿರೋಧಿಸಿವೆ. ಒಂದು ವೇಳೆ ದೇಶದೊಳಗೆ ಹೈನು ಉತ್ಪನ್ನಗಳ ಆಮದಿಗೆ ಅವಕಾಶ ನೀಡಿದರೆ ರೈತರು ತೊಂದರೆಗೆ ಸಿಲುಕುವುದರಿಂದ ಖಾಸಗಿ ಕಂಪನಿಗಳ ಈ ಪದ್ಧತಿ ಸರಿಯಲ್ಲ ಎಂಬುದು ಅವುಗಳ ವಾದ. ದೇಶದಲ್ಲಿ ಹಾಲಿನ ಪೂರೈಕೆ ಇಳಿಮುಖವಾದಾಗ ರೈತರಿಗೆ ಸೂಕ್ತ ಬೆಲೆ ನೀಡಲು ಮುಂದಾಗದ ಖಾಸಗಿ ಕಂಪನಿಗಳು ಈಗ ಹಾಲಿನ ಪುಡಿ ಖರೀದಿಗೆ ಪ್ರಯತ್ನ ನಡೆಸಿವೆ ಎಂಬ ಅಪವಾದವೂ ಇದೆ. ಏಕೆಂದರೆ, ಹೀಗೆ ಆಮದು ಮಾಡಿಕೊಂಡ ಹಾಲಿನ ಪುಡಿಯನ್ನು ದ್ರವವಾಗಿಸಿ ಮಾರಾಟ ಮಾಡಲಾಗುತ್ತದೆ. ಖಾಸಗಿ ಕಂಪನಿಗಳು ಹಾಲಿನ ಪುಡಿ ಆಮದು ಮಾಡಿಕೊಳ್ಳುವುದೇ ಈ ಉದ್ದೇಶದಿಂದ ಎಂದು ಅಮುಲ್‌ನಂತಹ ಕಂಪನಿಗಳು ಹೇಳುತ್ತವೆ. ಆದರೆ, ಹಲವಾರು ಇತರ ಖಾಸಗಿ ಕಂಪನಿಗಳು ಹೇಳುವುದೇ ಬೇರೆ. ಗುಜರಾತ್‌ನಲ್ಲಿ ಹಾಲಿನ ಪುಡಿಯ ದೊಡ್ಡ ಪ್ರಮಾಣದ ದಾಸ್ತಾನಿರುವುದರಿಂದ, ತಮ್ಮ ಬೇಡಿಕೆಗೆ ಕೇಂದ್ರ ಸರಕಾರ ಬೆಲೆ ಕೊಡುತ್ತಿಲ್ಲ ಎಂದು ಅವು ಆರೋಪಿಸುತ್ತವೆ.
2018-19ರಲ್ಲಿ ಹಾಲು ಪೂರೈಕೆ ಹೆಚ್ಚುವರಿಯಾದ ನಂತರದಿಂದ, ಬಹುತೇಕ ಹೈನುಗಾರಿಕಾ ಕಂಪನಿಗಳು ಹೆಚ್ಚುವರಿ ಹಾಲನ್ನು ಪುಡಿಯಾಗಿಸಿ ಭವಿಷ್ಯದ ಬಳಕೆಗಾಗಿ ದಾಸ್ತಾನು ಮಾಡತೊಡಗಿವೆ. ಪ್ರಸಕ್ತ ಆರ್ಥಿಕ ವರ್ಷದ ಪ್ರಾರಂಭದ ಅವಧಿಯಲ್ಲಿ ಹಾಲಿನ ಉತ್ಪಾದನೆ ಇಳಿಕೆಯಾದಾಗ, ಹಾಲಿನ ಅಲಭ್ಯತೆಯ ನೆವ ಮುಂದು ಮಾಡಿದ ಕೆಲವು ಖಾಸಗಿ ಹಾಲು ಉತ್ಪಾದಕ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಿಕೊಂಡವು. ಆದರೆ, ರೈತರಿಗೆ ದಕ್ಕಬೇಕಾದ ಸೂಕ್ತ ಬೆಂಬಲ ಬೆಲೆಯನ್ನು ಕೊಡಬೇಕೆಂಬುದರತ್ತ ಮಾತ್ರ ಈ ಕಂಪನಿಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲ. ಇವುಗಳ ಮೇಲಿರುವ ಇನ್ನೂ ಒಂದು ಆಪಾದನೆ ಏನೆಂದರೆ, ಉತ್ಪಾದನೆ ಕುಸಿತಗೊಂಡ ಸಂದರ್ಭದಲ್ಲಿ ಕೆಲವು ಹಾಲು ಉತ್ಪಾದಕ ಕಂಪನಿಗಳು ತಮ್ಮಲ್ಲಿರುವ ಹಾಲಿನ ಪುಡಿಯನ್ನು ಹೆಚ್ಚಿನ ಬೆಲೆಗೆ ಮಾರುತ್ತವೆ ಎಂಬುದು. ಕಳೆದ ನಾಲ್ಕು ತಿಂಗಳುಗಳಿಂದ ಮಾರಾಟ ಬೆಲೆಯಲ್ಲಿ ಆಗುತ್ತಿರುವ ನಿರಂತರ ಹೆಚ್ಚಳ ಇದನ್ನು ದೃಢಪಡಿಸಿದೆ ಎನ್ನುತ್ತಾರೆ ಹೈನು ಉದ್ಯಮ ತಜ್ಞರು.
ಉತ್ಪಾದನೆ ಹೆಚ್ಚಿಸಲು ಸಹಾಯಧನ:
ಹಾಲು ಉತ್ಪಾದನಾ ವೆಚ್ಚವನ್ನು ಕೂಡಾ ಹಿಂಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವುದರಿಂದ, ತಮ್ಮ ರಾಸುಗಳಿಗೆ ಆರೋಗ್ಯಕರ ಸೌಲಭ್ಯಗಳನ್ನಾಗಲಿ, ಗುಣಮಟ್ಟದ ಆಹಾರವನ್ನಾಗಲಿ ಒದಗಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನೇಕ ಸಂದರ್ಭಗಳಲ್ಲಿ ಹಲವಾರು ಪ್ರಾಣಿಗಳು ಜೀವ ಸಹ ಕಳೆದುಕೊಂಡಿವೆ. ಪಶುಸಂಗೋಪನೆಯನ್ನೇ ವೃತ್ತಿಯಾಗಿ ಮಾಡಿಕೊಂಡವರು ಕೂಡಾ ಈ ಉದ್ಯಮದಿಂದ ವಿಮುಖರಾಗುತ್ತಿದ್ದಾರೆ. ಹಾಲು ಉತ್ಪಾದನೆಯ ಮೂರನೇ ಒಂದಂಶದ ವೆಚ್ಚವನ್ನು ಹೊಂದಿಸಿಕೊಳ್ಳುವುದು, ಹೆಚ್ಚುತ್ತಿರುವ ಕೂಲಿ ವೆಚ್ಚ, ಕೃತಕ ಗರ್ಭಧಾರಣೆ ಸೇವೆಗಳ ಕೊರತೆ ಹಾಗೂ ಪಶು ವೈದ್ಯಕೀಯದ ಮೂಲಭೂತ ಕೊರತೆಗಳೇ ಇದಕ್ಕೆ ಕಾರಣಗಳಾಗಿವೆ. ಅಲ್ಲದೇ ಬಹುತೇಕರ ವಿಫಲರಾಗಲು ಈ ಉದ್ಯಮದ ಆಧುನಿಕ ತಂತ್ರಜ್ಞಾನದ ಮೂಲಭೂತ ತಿಳಿವಳಿಕೆಯ ಕೊರತೆಯೇ ಕಾರಣ.
ಈ ಪರಿಸ್ಥಿತಿ ಬದಲಾಗಬೇಕೆಂದರೆ, ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಹೈನು ಉತ್ಪನ್ನಗಳ ಮಾರಾಟ ಹೆಚ್ಚಿಸಲು ರೈತರಿಗೆ ಸೂಕ್ತ ಉತ್ತೇಜಕ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯನ್ನು ಹೈನು ಉದ್ಯಮಗಳು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲುದು. ಹೆಚ್ಚುತ್ತಿರುವ ಉಷ್ಣತೆಯನ್ನು ಸಹಿಸಿಕೊಳ್ಳಬಲ್ಲಂತಹ ಹೈನು ರಾಸುಗಳನ್ನಷ್ಟೇ ಆಯ್ಕೆ ಮಾಡಬೇಕು. ಬರ ಪರಿಸ್ಥಿತಿಯನ್ನು ಎದುರಿಸಬಲ್ಲ ರೀತಿಯಲ್ಲಿಯೇ ಇಂತಹ ರಾಸುಗಳನ್ನು ಬೆಳೆಸುವುದೂ ಮುಖ್ಯ. ಇದರ ಜೊತೆಗೆ, ಹಾಲಿನ ಉತ್ಪಾದನೆ ಹೆಚ್ಚಬೇಕೆಂದರೆ ರಾಸುಗಳ ಖರೀದಿಗೆ ಸಹಾಯಧನ ನೀಡುವ ಅವಶ್ಯಕತೆಯೂ ಇದೆ. ದನಗಳ ಕೊಟ್ಟಿಗೆಯಲ್ಲಿ ಉಷ್ಣತೆ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಮನ್ನಣೆ ಪಡೆದ ವಿಧಾನಗಳನ್ನು ಅಳವಡಿಸಿಕೊಂಡರೆ, ಇಂತಹ ರಾಸುಗಳು ವಾತಾವರಣದ ಬದಲಾವಣೆಗೆ ಒಗ್ಗಿಕೊಳ್ಳುವುದು ಸಾಧ್ಯವಾಗಿ ಹಾಲಿನ ಉತ್ಪಾದನೆ ಹೆಚ್ಚಲು ಸಾಧ್ಯ. ಸಮಗ್ರ ಹೈನು ರಾಸುಗಳ ಮೇಯುವಿಕೆ, ಸಮತೋಲಿತ ಆಹಾರ ಪದ್ಧತಿ, ಉತ್ತಮ ತಳಿಯ ಹೋರಿಗಳು ಹಾಗೂ ಎಮ್ಮೆಗಳ ಸಂತಾನೋತ್ಪತ್ತಿ, ಸ್ವಚ್ಛತೆ ಹಾಗೂ ಹಾಲು ಉತ್ಪಾದಕರ ಮೇವು ಸಂಗ್ರಹದಂತಹ ಸಹಕಾರ ಕ್ರಮಗಳ ಮೂಲಕ ಹಾಲಿನ ಉತ್ತಮ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಾದೀತು.
ಉತ್ಪಾದನೆಯಲ್ಲಿ ಹಿಂದುಳಿಯುವಿಕೆ:
ಹಾಲಿನ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ತನ್ನ ಸರಸಾರಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದು ಅದಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮ ಹಾಲಿನ ವಾರ್ಷಿಕ ಉತ್ಪಾದನೆಯ ಬೆಳವಣಿಗೆ ಶೇಕಡಾ 4.5ರಷ್ಟಿದ್ದರೆ, ಜಾಗತಿಕ ಸರಾಸರಿ ಕೇವಲ ಶೇಕಡಾ 1.8 ಮಾತ್ರ. ಕೃಷಿ ಕ್ಷೇತ್ರದ ನಂತರದ ಸ್ಥಾನದಲ್ಲಿ ಪಶು ಸಂಗೋಪನೆ ಕ್ಷೇತ್ರದ ರಾಸುಗಳ ಸಂಖ್ಯೆ ಇದೆ. 2017-18ನೇ ಸಾಲಿನಲ್ಲಿ ಭಾರತ 17.63 ಲಕ್ಷ ಟನ್ ಹಾಲನ್ನು ಉತ್ಪಾದಿಸಿತ್ತು (ಅಂದರೆ, ಜಗತ್ತಿನ ಒಟ್ಟು ಉತ್ಪಾದನೆಯ ಶೇಕಡಾ 20.21ರಷ್ಟು). ನಮ್ಮ ತಲಾವಾರು ಹಾಲಿನ ಉತ್ಪಾದನೆ ಪ್ರಮಾಣ 375ಗ್ರಾಂನಷ್ಟಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯು 1790ರಲ್ಲಿ ಜಾರಿಗೆ ತಂದ ಕ್ಷೀರ ಕ್ರಾಂತಿಯ (ಆಪರೇಶನ್ ಫ್ಲಡ್) ನಂತರ, ನಮ್ಮ ದೇಶ ಜಗತ್ತಿನ ಅತ್ಯಧಿಕ ಹಾಲು ಉತ್ಪಾದಕ ದೇಶವಾಯಿತು. ಒಂದು ಸಮಯದಲ್ಲಿ ತನ್ನ ಆಂತರಿಕ ಬಳಕೆಗಾಗಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಅದರ ಬದಲಾಗಿ ಅವನ್ನು ರಫ್ತು ಮಾಡಲು ಪ್ರಾರಂಭಿಸಿತು.
ಸದ್ಯ ಪಶು ಸಾಕಣೆಯ ಮೇಲೆ ದೇಶದ 2.29 ಕೋಟಿ ಜನ ಅವಲಂಬಿತರಾಗಿದ್ದಾರೆ. ಈ ಪೈಕಿ 1.18 ಕೋಟಿ ಜನ ಹೆಣ್ಣುಮಕ್ಕಳು. ಇವರೆಲ್ಲ ಸಣ್ಣ, ನಗಣ್ಯ ಮತ್ತು ಭೂರಹಿತ ಕಾರ್ಮಿಕರು. ಪಂಜಾಬ್, ಹರಿಯಾಣ, ರಾಜಸ್ತಾನ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ದೇಶದ ಹಾಲು ಉತ್ಪಾದನೆಯಲ್ಲಿ ಮೊದಲ ಐದು ಸ್ಥಾನಗಳಲ್ಲಿವೆ. 2019ರಲ್ಲಿ ಹೈನು ಉತ್ಪನ್ನ 18.77 ಕೋಟಿ ಟನ್‌ಗಳಷ್ಟಿತ್ತು ಎಂದು ಅಂದಾಜಿಸಲಾಗಿದೆ. 2033ರಲ್ಲಿ ಈ ಪ್ರಮಾಣ 33 ಕೋಟಿ ತಲುಪಬಹುದು ಎಂದು ನೀತಿ ಆಯೋಗ ನಿರೀಕ್ಷಿಸಿದೆ. ಇದೇ ಅವಧಿಯಲ್ಲಿ ಹಾಲಿನ ಬೇಡಿಕೆಯು 29.9 ಕೋಟಿ ಟನ್‌ಗೆ ತಲುಪಬಹುದು ಎಂದು ಹೈನೋದ್ಯಮ ಮೂಲಗಳು ಅಂದಾಜಿಸಿವೆ.
ಹಾಲು ಉತ್ಪಾದನೆ ಪ್ರಮಾಣ ಹೀಗೆ ನಿರಂತರ ಏರಿಕೆ ದಾಖಲಿಸುತ್ತಿದ್ದಾಗ್ಯೂ, ದೇಶಾದ್ಯಂತ ಹಾಲಿನ ಬೆಲೆಗಳು ಮಾತ್ರ ಅಸ್ಥಿರವಾಗಿಯೇ ಉಳಿದಿರುವುದು ಗಮನಿಸಬೇಕಾಗಿರುವ ಸಂಗತಿ. ಕೆಲವು ಖಾಸಗಿ ಹೈನುಗಾರಿಕಾ ಸಂಸ್ಥೆಗಳು ರೈತರಿಂದ ಸಂಗ್ರಹಿಸುವ ಹಾಲಿಗೆ ಉತ್ತಮ ಬೆಲೆಯನ್ನು ನೀಡುತ್ತಿಲ್ಲ. ಬದಲಾಗಿ, ಗ್ರಾಹಕರಿಗೆ ಮಾರುವ ಹಾಲಿನ ದರವನ್ನು ಹೆಚ್ಚಿಸುವ ಮೂಲಕ ಅವು ಲಾಭ ಮಾಡಿಕೊಳ್ಳುತ್ತಿವೆ. ಸಹಕಾರಿ ಹೈನು ಉದ್ಯಮ ಸಂಸ್ಥೆಗಳು ರೈತರಿಗೆ ಕೆಲವು ಸವಲತ್ತುಗಳನ್ನು ನೀಡಲು ಪ್ರಯತ್ನಿಸುತ್ತಿವೆಯಾದರೂ, ಹಲವಾರು ಖಾಸಗಿ ಹೈನು ಸಂಸ್ಥೆಗಳು ರೈತರಿಗೆ ನೀಡುತ್ತಿರುವ ದರಗಳು ಪ್ರಶ್ನಿಸುವಂತಿವೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ದೇಸಿ ಹಾಲು ಉತ್ಪಾದನೆ ಪ್ರಮಾಣ ಶೇಕಡಾ 5.6ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಕ್ರೈಸಿಲ್ (ಸಿಆರ್‌ಐಎಸ್‌ಐಎಲ್) ಸಂಸ್ಥೆ ಅಂದಾಜಿಸಿದೆ. ಅಂದರೆ, 17.6 ಕೋಟಿ ಟನ್‌ನಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಬಹುದು. ಹೀಗಿದ್ದರೂ, ಡಿಸೆಂಬರ್ ಅಂತ್ಯಕ್ಕೇ ದೇಸಿ ಹಾಲು ಉತ್ಪಾದನೆ ಪ್ರಮಾಣದಲ್ಲಿ ಶೇಕಡಾ ೬ರಷ್ಟು ಕೊರತೆ ಕಂಡುಬಂದಿರುವುದು ಕಳವಳಕಾರಿ. ಇದನ್ನು ಹತೋಟಿಗೆ ತರಲು ಸರಕಾರ ಸಾಧ್ಯವಾದಷ್ಟೂ ಬೇಗ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ವಿಷಮಿಸಲಿದೆ.