ನವದೆಹಲಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ 'ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ್' ಅಡಿ ಪಶ್ಚಿಮ ಬಂಗಾಳವನ್ನು ಸಂಯೋಜಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
"ನೀವು ಈಗಾಗಲೇ ಆರು ರಾಜ್ಯಗಳ 116 ಜಿಲ್ಲೆಗಳನ್ನು ಒಳಗೊಂಡ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನವನ್ನು ಘೋಷಿಸಿದ್ದೀರಿ. ಆರು ರಾಜ್ಯಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಜೀವನೋಪಾಯವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ 125 ದಿನಗಳವರೆಗೆ ಮುಂದುವರಿಯುತ್ತದೆ" ಎಂದು ಚೌಧರಿ ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಲಾಕ್‌ಡೌನ್ ಕಾರಣದಿಂದಾಗಿ ತಮ್ಮ ಸ್ಥಳೀಯ ಹಳ್ಳಿಗಳಿಗೆ ಮರಳಿದ್ದಾರೆ. ಹೀಗಾಗಿ ಅವರು ನಿರುದ್ಯೋಗಿಗಳಾಗಿದ್ದಾರೆ. ಆದರೆ, ಪಶ್ಚಿಮ ಬಂಗಾಳ ರಾಜ್ಯದ ಒಂದು ಜಿಲ್ಲೆಯನ್ನೂ ಕೂಡಾ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದಲ್ಲಿ ಸೇರಿಸಲಾಗಿಲ್ಲ" ಎಂದು ಅವರು ಬರೆದಿದ್ದಾರೆ.
ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಅರ್ಹವಾಗಿರುವ ಪಶ್ಚಿಮ ಬಂಗಾಳದ ಜಿಲ್ಲೆಗಳ ಸಂಖ್ಯೆಯನ್ನು ಮರು ಮೌಲ್ಯಮಾಪನ ಮಾಡಬೇಕು ಎಂದು ಅಧೀರ್ ರಂಜನ್ ಚೌಧರಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.