ತಿರುವನಂತಪುರಂ ( ಕೇರಳ ) : ರಾಜ್ಯದಲ್ಲಿ 1 ರಿಂದ 12 ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಗಳ ಮೂಲಕ ನೂತನ ಶೈಕ್ಷಣಿಕ ವರ್ಷದ ಪಾಠ ಪ್ರವಚನ ಆರಂಭಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಕೈಟ್-ವಿಕ್ಟರ್ಸ್ ಚಾನೆಲ್ ಮುಖಾಂತರ ಆನ್ಲೈನ್ ತರಗತಿ ನಡೆಯಲಿದ್ದು, ಸೋಮವಾರ ದೂರದರ್ಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ಲೈನ್ ತರಗತಿಗಳ ಆರಂಭವನ್ನು ಘೋಷಣೆ ಮಾಡಿದರು.
ಪ್ರತಿ ದಿನದ ತರಗತಿಗಳಿಗೆ ಪ್ರತ್ಯೇಕ ಸ್ಲಾಟ್ ನಿಗದಿಪಡಿಸಲಾಗಿದೆ. ಆಯಾ ಅವಧಿಗೆ ಅನುಗುಣವಾಗಿ ಶಿಕ್ಷಕರು ತರಗತಿಗಳನ್ನು ನಡೆಸಲಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ತರಗತಿ ವೀಕ್ಷಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರತಿ ದಿನ ತರಗತಿಗಳ ಮರುಪ್ರಸಾರ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ಕೇರಳ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಶಿಕ್ಷಣ (ಕೈಟ್)ದ ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅನ್ವರ್ ಸಾದಾತ್, ಸುಮಾರು 16 ಸಾವಿರ ಶಾಲೆಗಳಲ್ಲಿ ಐಟಿ ತಂತ್ರಜ್ಞಾನ ವ್ಯವಸ್ಥೆ ಇರುವುದರಿಂದ ನಮಗೆ ಆನ್ಲೈನ್ ತರಗತಿಗಳನ್ನು ನಡೆಸಲು ಅನುಕೂಲವಾಗಿದೆ. ಮೊದಲ ದಿನ 12 ನೇ ತರಗತಿಯ ಇಂಗ್ಲಿಷ್ ವಿಷಯದ ಧ್ವನಿ ಮುದ್ರಣವನ್ನು ಅರ್ಧಗಂಟೆ ಪ್ರಸಾರ ಮಾಡಿ ತರಗತಿ ಆರಂಭಿಸಿದ್ದೇವೆ. ಪ್ರತಿದಿನ 12 ನೇ ತರಗತಿಗೆ ನಾಲ್ಕು ಅವಧಿ, 10 ನೇ ತರಗತಿಗೆ ಮೂರು 8 ಮತ್ತು 9 ನೇ ತರಗತಿಗೆ ಎರಡು ಅವಧಿ ಹಾಗೂ ಇನ್ನುಳಿದ ಎಲ್ಲಾ ತರಗತಿಗೆ ಒಂದು ಅವಧಿ ಪಾಠ ಪ್ರವಚನ ನಡೆಯಲಿದೆ ಎಂದರು.