ತಿರುವನಂತಪುರ (ಕೇರಳ): ಸಮಾಜದ ವಿವಿಧ ವರ್ಗಗಳ ಬುಡಕಟ್ಟು ಜನಾಂಗದವರು, ಮೀನುಗಾರರು, ಎಸ್‌ಸಿ/ಎಸ್‌ಟಿ ಕಾಲೊನಿ ನಿವಾಸಿಗಳು ಮತ್ತು ವಲಸಿಗರು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಅನಕ್ಷರಸ್ಥರು ಈಗ ಸಾಕ್ಷರರಾಗುತ್ತಿದ್ದಾರೆ ಎಂದು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಶನಿವಾರ ಹೇಳಿದೆ.
ಅನಕ್ಷರಸ್ಥರನ್ನು ಪತ್ತೆ ಹಚ್ಚಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡುವುದೇ ಈ ಮಿಷನ್ ಉದ್ದೇಶ. ಅದು ಈಗಲೂ ಮುಂದುವರಿಯುತ್ತಿದೆ. 2017-2020ರವರೆಗೆ ಕೇರಳದಲ್ಲಿ ಒಟ್ಟು 1,05,565 ಅನಕ್ಷರಸ್ಥರು ಹೊಸ ಸಾಕ್ಷರರಾಗಿ ಹೊರಹೊಮ್ಮಿದ್ದಾರೆ. ನಮ್ಮ ತಂಡದ ಕಠಿಣ ಪರಿಶ್ರಮವೇ ಈ ಉತ್ತಮ ಫಲಿತಾಂಶಕ್ಕೆ ಕಾರಣ ಎಂದು ಮಿಷನ್ ನಿರ್ದೇಶಕ ಪಿ.ಎಸ್. ಶ್ರೀಕಲಾ ಹೇಳಿದರು.
ನವಸಾಕ್ಷರರಲ್ಲಿ ವಯನಾಡ್ ಮತ್ತು ಪಾಲಕ್ಕಾಡ್‌ನ 10,972 ಆದಿವಾಸಿಗಳು ಸೇರಿದ್ದಾರೆ. ಜೊತೆಗೆ 2,000ಕ್ಕೂ ಹೆಚ್ಚು ಕಾಲೊನಿಗಳ 30,000 ಜನ ಮತ್ತು 4,000 ವಲಸೆ ಕಾರ್ಮಿಕರು ಸಹ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಹಾಗೆಯೇ ರಾಜ್ಯದ ವಿವಿಧ ಮೀನುಗಾರಿಕಾ ಹಳ್ಳಿಗಳ 8,000ಕ್ಕೂ ಅಧಿಕ ಮಂದಿ ಅದರಲ್ಲಿದ್ದಾರೆ.
ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಭಾಗೀರಥಿ ಅಮ್ಮ ಮತ್ತು 98 ವರ್ಷದ ಕಾರ್ತಿಯಾಯಿನಿ ಅಮ್ಮ. ಇವರಿಬ್ಬರಿಗೂ ಈ ವರ್ಷದ ಮಾರ್ಚ್‌ನಲ್ಲಿ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. 105 ವರ್ಷದ ಭಾಗೀರಥಿ ಅಮ್ಮನವರು ನಾಲ್ಕನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಇವರು ದೇಶದ ಅತ್ಯಂತ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.