ಹೈದರಾಬಾದ್: ಕೊರೊನಾ ಪೀಡಿತರಿಗೆ ಅವಶ್ಯಕವಾಗಿ ಬೇಕಾಗುವ ವೆಂಟಿಲೇಟರ್ಗಳನ್ನು ಕಡಿಮೆ ದರದಲ್ಲಿ ತಯಾರಿಸಲಾಗಿದೆ ಎಂದು ಹೈದರಾಬಾದ್ ಐಐಟಿ ತಿಳಿಸಿದೆ. ಈ ವೆಂಟಿಲೇಟರ್ಗಳು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಸೇರಿದಂತೆ, ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಭರವಸೆ ಮೂಡಿದೆ.
ಐಐಟಿ ಹೈದರಾಬಾದ್ನ ಡೈರೆಕ್ಟರ್ ಪ್ರೊಫೆಸರ್ ಬಿ.ಎಸ್.ಮೂರ್ತಿ ಹಾಗೂ ಮೆಕ್ಯಾನಿಕಲ್ ಹಾಗೂ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ವಿ. ಈಶ್ವರನ್ ಈ ಬಗ್ಗೆ ವಿವರಣೆ ನೀಡಿದ್ದಾರೆ. ಈ ವೆಂಟಿಲೇಟರ್ಗಳನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದ್ದು, ಸುಲಭವಾಗಿ ತಯಾರಿಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಉತ್ಪಾದನೆಯಾಗುವ ಕಾರಣದಿಂದ ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಒದಗಲಿದೆ. ಇವುಗಳನ್ನು ಅಂಬು ಬ್ಯಾಗ್ ಎಂದು ದೆಹಲಿ ಐಐಟಿ ಹೆಸರಿಸಿದೆ.
ಭಾರತ ಸರ್ಕಾರ ಇವುಗಳನ್ನು ಅಳವಡಿಸಿಕೊಂಡು ವೆಂಟಿಲೇಟರ್ಗಳ ಸಮಸ್ಯೆಗಳನ್ನು ನೀಗಿಸಬೇಕು. ಇದರಿಂದ ದೇಶ ಮಾತ್ರವಲ್ಲದೇ ಹೊರದೇಶಗಳಲ್ಲಿನ ವೆಂಟಿಲೇಟರ್ ಸಮಸ್ಯೆಯನ್ನು ನೀಗಿಸಬಹುದು ಎಂಬುದು ಐಐಟಿ ಸಂಶೋಧಕರ ಅಭಿಪ್ರಾಯ. ಕೇವಲ 5 ಸಾವಿರು ರೂಪಾಯಿ ಅಂದಾಜು ಬೆಲೆಯಿದ್ದು, ಒಂದು ಬಾರಿಗೆ ಒಬ್ಬ ರೋಗಿ ಮಾತ್ರ ಬಳಸಬಹುದು, ಪುನರ್ಬಳಕೆ ಮಾಡಲು ಸಾಧ್ಯವಿಲ್ಲ. ಕೆಲವೇ ತಿಂಗಳಲ್ಲಿ ಮಿಲಿಯನ್ಗಟ್ಟಲೇ ಉತ್ಪಾದನೆ ಮಾಡಬಹುದು ಎಂಬುದು ಐಐಟಿ ತಜ್ಞರ ಅಭಿಪ್ರಾಯ.
ಕೆಲವು ದಿನಗಳಿಂದ ಅನೇಕ ರಾಷ್ಟ್ರಗಳು ಕಡಿಮೆ ದರದ ವೆಂಟಿಲೇಟರ್ಗಳನ್ನು ಉತ್ಪಾದಿಸಲು ಮುಂದಾಗಿದ್ದವು. ಈ ವೇಳೆ ಹೈದರಾಬಾದ್ ಐಐಟಿಯ ಈ ರೀತಿಯ ಸಂಶೋಧನೆ ನಡೆಸಿ ಪ್ರಶಂಸೆಗೆ ಪಾತ್ರವಾಗಿದೆ.