ನವದೆಹಲಿ: ಸುಪ್ರೀಂಕೋರ್ಟ್ ಒಂದು ವೇಳೆ ಪ್ರಯಾಣಿಕರ ಕಾಯ್ದಿರಿಸಿದ ಟಿಕೆಟ್ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸುವಂತೆ ಆದೇಶ ನೀಡಿದರೆ, $300 ಮಿಲಿಯನ್ ದೇಶಿಯ ಧನ ಸಹಾಯದ ಅಗತ್ಯವಿದೆ ಎಂದು ಸಿಎಪಿಎ ಭಾರತ ವರದಿಯಲ್ಲಿ ತಿಳಿಸಿದೆ.
ವಿಮಾನಯಾನ ಸಂಸ್ಥೆಗಳ ಮರುಪಾವತಿಯ ಮೌಲ್ಯವನ್ನು 500 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದರಲ್ಲಿ ದೇಶೀಯ ಬುಕಿಂಗ್‌ಗಾಗಿ ಸುಮಾರು 300 ಮಿಲಿಯನ್ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಮತ್ತು ಇತರೆ ಮರುಪಾವತಿಗಾಗಿ 200 ಮಿಲಿಯನ್ ಗಿಂತಲೂ ಹೆಚ್ಚಿನ ಮೊತ್ತವನ್ನು ಒಳಗೊಂಡಿದೆ ಎಂದು ಸಿಎಪಿಎ ಹೇಳಿದೆ.
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಟಿಕೆಟ್‌ಗಳ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿ ಕೋರಿ ಮನವಿ ಸಲ್ಲಿಸಿ ಸುಪ್ರೀಂಕೋರ್ಟ್ ಏಪ್ರಿಲ್ 27 ರಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೋಟಿಸ್ ನೀಡಿತ್ತು. ಆದರೆ ವಿಮಾನಯಾನ ಸಚಿವಾಲಯ ಆದೇಶವನ್ನು ಉಲ್ಲಂಘಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ ಮೊದಲ ಹಂತದ ಲಾಕ್‌ಡೌನ್ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ, ಮಾರ್ಚ್ 25 ಮತ್ತು ಮೇ 3 ರ ನಡುವಿನ ಪ್ರಯಾಣಕ್ಕಾಗಿ ವಿಮಾನಯಾನ ಸಂಸ್ಥೆಗಳು ರದ್ದತಿ ಶುಲ್ಕ ವಿಧಿಸದೆ ಪೂರ್ಣ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಏಪ್ರಿಲ್ 16 ರಂದು ಜ್ಞಾಪನಾ ಪತ್ರವನ್ನು ಹೊರಡಿಸಿತ್ತು.
ವರದಿಯ ಪ್ರಕಾರ, ಇಂಡಿಗೊವನ್ನು ಹೊರತುಪಡಿಸಿ ವಿಮಾನಯಾನ ಸಂಸ್ಥೆಗಳು ನಷ್ಟ ಹೊಂದದಿರಲು ಕನಿಷ್ಠ 2.5 ಶತಕೋಟಿ ಸಂಗ್ರಹಿಸಬೇಕಾಗುತ್ತದೆ. ಭಾರತೀಯ ಇತರೆ ವಾಯುಯಾನ ಸಂಸ್ಥೆಗಳಿಗೆ ಹೊಲಿಸಿದರೆ, ಇಂಡಿಗೊ ಉತ್ತಮ ಸ್ಥಾನದಲ್ಲಿದೆ. ಆದರೂ ಇದು ದೀರ್ಘಕಾಲ ಇರುವುದಿಲ್ಲ ಎಂದು ಸಿಎಪಿಎ ಹೇಳಿದೆ.