ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 38ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ 5 ಸುತ್ತಿನ ಮಾತುಕತೆ ನಡೆಸಿದ್ರೂ ಕೇಂದ್ರದಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ.
ನಾಲ್ಕು ಬೇಡಿಕೆಗಳ ಪೈಕಿ ವಿದ್ಯುತ್ ದರ ಹಾಗೂ ಕೃಷಿ ತ್ಯಾಜ್ಯ ಸುಡುವ ವಿಷಯಗಳಲ್ಲಿ 5ನೇ ಸುತ್ತಿನ ಸಭೆಯಲ್ಲಿ ಒಮ್ಮತ ಮೂಡಿದೆ. ಆದರೆ, ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಮಾತ್ರ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ರೈತ ಮುಖಂಡರು ಸರ್ಕಾರಕ್ಕೆ ಮತ್ತೊಂದು ಗಡುವು ನೀಡಿದ್ದಾರೆ.
ಇದನ್ನೂ ಓದಿ: ಜನವರಿ 26 ರಂದು ‘ಟ್ರ್ಯಾಕ್ಟರ್ ಪರೇಡ್’ಗೆ ಕರೆ ನೀಡಿದ ಪ್ರತಿಭಟನಾನಿರತ ರೈತ ಸಂಘಟನೆಗಳು
ಈ ಬಗ್ಗೆ ಮಾತನಾಡಿರುವ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ಜನವರಿ 26ರೊಳಗೆ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದೆಹಲಿಯಲ್ಲಿ 'ಕಿಸಾನ್ ಗಂಟಾಂತರ ಪರೇಡ್' ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಸಾಧ್ಯವಾದರೆ ದೇಶದ ಪ್ರತಿ ರೈತ ಕುಟುಂಬದಿಂದ ಒಬ್ಬ ಸದಸ್ಯರನ್ನು ದೆಹಲಿಗೆ ಕಳುಹಿಸಿ ಕೊಡಿ ಎಂದು ರೈತರ ಕುಟುಂಬದವರಲ್ಲಿ ಮನವಿ ಮಾಡಿದ್ದಾರೆ.
ಕ್ರಾಂತಿಕಾರಿ ಕಿಸಾನ್ ಸಂಘದ ಅಧ್ಯಕ್ಷ ದರ್ಶನ್ ಪಾಲ್ ಮಾತನಾಡಿ, ಹಲವು ರಾಜ್ಯಗಳಲ್ಲಿ ಜನವರಿ 23ರಂದು ರಾಜ್ಯಪಾಲರ ಮನೆಗಳತ್ತ ಮಾರ್ಚ್ ನಡೆಸುತ್ತೇವೆ. ಜೊತೆಗೆ ಜನವರಿ 26ರಂದು ಟ್ರ್ಯಾಕ್ಟರ್ ಕಿಸಾನ್ ಪರೇಡ್ ನಡೆಸುವುದಾಗಿ ಹೇಳಿದ್ದಾರೆ.