ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯಾಗಬೇಕಾದರೆ ಶ್ರೀನಗರದಲ್ಲಿ ಬಂಧನದಲ್ಲಿರುವ ಎಲ್ಲ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಗೃಹ ಬಂಧನದಿಂದ ಬಿಡುಗಡೆಯಾಗಿರುವ ಫಾರೂಕ್ ಅಬ್ದುಲ್ಲಾ ಅವರನ್ನ ಭೇಟಿ ಮಾಡಿ ಮಾತನಾಡಿದ ಅವರು, 'ಜಮ್ಮು ಮತ್ತು ಕಾಶ್ಮೀರ ಪ್ರಗತಿ ಸಾಧಿಸಬೇಕಾದರೆ, ಶ್ರೀನಗರದಲ್ಲಿ ಬಂಧನದಲ್ಲಿರುವ ಎಲ್ಲಾ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡಬೇಕು' ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಪ್ರಕ್ರಿಯೆ ಪ್ರಾರಂಭವಾಗಬೇಕು. ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ ಚುನಾವಣೆ ನಡೆಸಬೇಕು ಎಂದು ಆಜಾದ್ ಹೇಳಿದ್ದಾರೆ.
ಏಳು ತಿಂಗಳ ನಂತರ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದೇನೆ. ಇಷ್ಟು ದಿನ ಅವರನ್ನು ಬಂದಿಸಲಾಗಿತ್ತು, ಅವರ ಬಂಧನಕ್ಕೆ ಕಾರಣ ಏನೆಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ. ಮೂರು ವರ್ಷಗಳಿಂದ ಯಾವುದೇ ಯೋಜನೆ ಅಥವಾ ನೂತನ ಕಾರ್ಯಗಳು ನಡೆದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ನಿರುದ್ಯೋಗ ಉಂಟಾಗಿದೆ ಎಂದು ಆಜಾದ್ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿರುವ ನಿರ್ಧಾರವು ರಾಜ್ಯದ ಜನರನ್ನು ಅವಮಾನಿಸಿದಂತಿದೆ. ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಜಮ್ಮು ಮತ್ತು ಕಾಶ್ಮೀರವನ್ನು ಮತ್ತೆ ರಾಜ್ಯವೆಂದು ಘೋಷಿಸಬೇಕು ಎಂದಿದ್ದಾರೆ.