ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ. ಇನ್ನಷ್ಟು ಮೊದಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದರೆ ಕೊರೊನಾ ವೈರಸ್ ಇಷ್ಟೊಂದು ಹರಡುತ್ತಿರಲಿಲ್ಲ ಎಂದು ಛತ್ತೀಸಗಢ ಸಿಎಂ ಭೂಪೇಶ ಬಾಘೇಲ್ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿದ್ದಲ್ಲ. ಬೇರೆ ದೇಶಗಳಿಂದ ಇದು ಭಾರತಕ್ಕೆ ಬಂದಿದೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಬೇಗನೇ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧಿಸಬೇಕಿತ್ತು. ಹಾಗೆಯೇ ಬೇರೆ ದೇಶಗಳಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ನಲ್ಲಿರಿಸಿದ್ದರೆ ಇಂದು ದೇಶದ ಕೋವಿಡ್ ಸ್ಥಿತಿ ಬೇರೆಯಾಗಿರುತ್ತಿತ್ತು ಎಂದು ತಿಳಿಸಿದರು.
ಕೊರೊನಾ ವೈರಸ್ ಬಿಕ್ಕಟ್ಟು ಒಂದು ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಹಾಗಂತ ತಬ್ಲೀಘಿ ಜಮಾತ್ ತಪ್ಪೇ ಮಾಡಿಲ್ಲ ಎಂದು ಹೇಳಲಾರೆ. ಜಮಾತ್ನಲ್ಲಿ ನೂರಾರು ವಿದೇಶಿಯರು ಪಾಲ್ಗೊಂಡಿದ್ದರು. ಆದರೆ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಮೊದಲೇ ರದ್ದುಗೊಳಿಸಿದ್ದಲ್ಲಿ ವಿದೇಶಿಯರ ಆಗಮನ ತಡೆಯಬಹುದಿತ್ತು ಹಾಗೂ ಕೋವಿಡ್ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಬಹುದಿತ್ತು ಎಂದು ಬಾಘೇಲ್ ನುಡಿದರು.
ಖಾಸಗಿ ಲ್ಯಾಬ್ಗಳು ನಡೆಸುವ ಕೋವಿಡ್ ಟೆಸ್ಟ್ ಖರ್ಚನ್ನು ಕೇಂದ್ರ ಸರಕಾರ ಭರಿಸುವ ಮೂಲಕ ಟೆಸ್ಟ್ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದರು.