ಬೆಳಗಾವಿ: ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು 370 ವಿಧಿಯನ್ನ ರದ್ದುಗೊಳಿಸಲು ಸಾಧ್ಯವಾಗಿದೆ. ಅದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಯಸಿದರೆ ಬೆಳಗಾವಿ ಗಡಿ ಸಮಸ್ಯೆಯನ್ನ ಸಹ ಪರಿಹರಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಗಡಿ ಸಮಸ್ಯೆ ಕೇಂದ್ರ ಗೃಹ ಇಲಾಖೆ ವ್ಯಾಪ್ತಿಯಲ್ಲೆ ಬರುತ್ತದೆ. 370ನೇ ವಿಧಿ ರದ್ಧುಪಡಿಸಿದ ಪ್ರಬಲ ಗೃಹ ಸಚಿವರು ಬಹು ಕಾಲದಿಂದಲೂ ಬಾಕಿ ಇರುವ ಬೆಳಗಾವಿ ಸಮಸ್ಯೆಯತ್ತ ಗಮನ ನೀಡಲಿ ಎಂದಿದ್ದಾರೆ.
ಬೆಳಗಾವಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ಮರಾಠಿ ಜನರು 70 ವರ್ಷದಿಂದ ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳ್ಳಲು ಹೋರಾಡುತ್ತಿದ್ದಾರೆ. ಈ ವಿಷಯವು ಸುಪ್ರೀಂಕೋರ್ಟ್ ಮುಂದಿದೆ. ಸುಪ್ರೀಂಕೋರ್ಟ್ ಏನು ತೀರ್ಮಾನಿಸಿದರೂ ನಾವು ಸ್ವೀಕರಿಸುತ್ತೇವೆ ಎಂದಿದ್ದಾರೆ. ಬೆಳಗಾವಿಯಲ್ಲಿ ವಾಸಿಸುವ ಲಕ್ಷಾಂತರ ಮರಾಠಿ ಜನ ತಮ್ಮ ಭಾಷೆ ಮತ್ತು ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಗಡಿ ವಿವಾದ ಇದ್ದರೆ ಇರಲಿ, ಭಾಷಾ ವಿವಾದಕ್ಕೆ ಇಳಿಯಬೇಡಿ. ಈ ವಿಷಯದಲ್ಲಿ ಎರಡೂ ರಾಜ್ಯದ ಮುಖ್ಯಂತ್ರಿಗಳು ತುರ್ತು ಪರಿಹಾರದ ಕುರಿತು ಚರ್ಚಿಸಬೇಕು ಎಂದು ನಾನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.