ಹೊಸದಿಲ್ಲಿ: ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿರುವ ಹಾಗೂ ಕೋವಿಡ್ ಹಾಟ್ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಶೀಘ್ರ ಪತ್ತೆ ಮಾಡಲು ರಕ್ತದ ಆ್ಯಂಟಿಬಾಡಿ ಟೆಸ್ಟ್ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ನೀಡಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ರಚಿಸಲಾಗಿರುವ ನ್ಯಾಷನಲ್ ಟಾಸ್ಕ್ ಫೋರ್ಸ್ನ ತುರ್ತು ಸಭೆಯಲ್ಲಿ ಈ ಮಧ್ಯಂತರ ಸಲಹೆಯನ್ನು ಮಂಡಿಸಲಾಯಿತು.
"ಕೋವಿಡ್ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ನಡೆಸಬಹುದು. ಗಂಟಲು ಅಥವಾ ಮೂಗಿನ ದ್ರವ ಬಳಸಿ ಆ್ಯಂಟಿಬಾಡಿ ಪಾಸಿಟಿವ್ ತಿಳಿಯಬಹುದು. ಹಾಗೆಯೇ ಆ್ಯಂಟಿಬಾಡಿ ನೆಗೆಟಿವ್ ಇರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಬಹುದು." ಎಂದು ಐಸಿಎಂಆರ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಆ್ಯಂಟಿಬಾಡಿ ಟೆಸ್ಟ್ನ ಫಲಿತಾಂಶವನ್ನು 15 ರಿಂದ 30 ನಿಮಿಷಗಳಲ್ಲಿ ಪಡೆದುಕೊಳ್ಳಬಹುದು. ಪ್ರಸ್ತುತ ಸೋಂಕಿನ ಲಕ್ಷಣವಿರುವ ಜನರ ಗಂಟಲು ಅಥವಾ ಮೂಗಿನ ದ್ರವ ಮಾದರಿಯನ್ನು ಪಾಲಿಮೆರೇಸ್ ಚೇನ್ ರಿಯಾಕ್ಷನ್ (polymerase chain reaction) ಟೆಸ್ಟ್ ಮಾಡುವ ಮೂಲಕ ಕೋವಿಡ್ ಸೋಂಕಿತರನ್ನು ಸರ್ಕಾರ ಪತ್ತೆ ಮಾಡುತ್ತಿದೆ.
ದೇಶಾದ್ಯಂತ ಈಗಾಗಗಲೇ ಇರುವ 20 ಹಾಟ್ಸ್ಪಾಟ್ ಹಾಗೂ ಬರುವ ದಿನಗಳಲ್ಲಿ ಹಾಟ್ಸ್ಪಾಟ್ ಆಗಬಹುದಾದ 22 ಸ್ಥಳಗಳನ್ನು ಕೇಂದ್ರದ ಆರೋಗ್ಯ ಇಲಾಖೆ ಗುರುತಿಸಿದೆ.