ನವದೆಹಲಿ: ಸೆಪ್ಟೆಂಬರ್ ಮೂರನೇ ವಾರದಲ್ಲಿ ಫ್ರಾನ್ಸ್ ದೇಶ ಭಾರತೀಯ ವಾಯುಸೇನೆಗೆ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
36 ರಫೇಲ್ ಯುದ್ಧ ವಿಮಾನವನ್ನು ಭಾರತೀಯ ಸೇನೆಗೆ ನೀಡುವ ಕುರಿತಂತೆ ಭಾರತ ಸರ್ಕಾರ ಫ್ರಾನ್ಸ್ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.
"ಸೆಪ್ಟೆಂಬರ್ 18ರಿಂದ 23ರ ಅವಧಿಯಲ್ಲಿ ಮೊದಲ ಹಂತದ ರಫೇಲ್ ಯುದ್ಧ ವಿಮಾನ ನೀಡುವಂತೆ ಫ್ರೆಂಚ್ ರಕ್ಷಣಾ ಇಲಾಖೆಗೆ ನಾವು ಲಿಖಿತ ರೂಪದಲ್ಲಿ ಮನವಿ ಮಾಡಿದ್ದೇವೆ. ಹೀಗಾಗಿ ರಫೇಲ್ ಯುದ್ಧ ವಿಮಾನ ಹಸ್ತಾಂತರ ಎರಡೂ ದೇಶಗಳಿಗೆ ಸಮರ್ಪಕವಾಗುವ ದಿನಾಂಕದಂದು ನಡೆಯಲಿದೆ" ಎಂದು ವಾಯುಸೇನೆ ಅಧಿಕೃತ ಮೂಲಗಳು ಹೇಳಿವೆ.
ಸೆಪ್ಟೆಂಬರ್ ಮೂರನೇ ವಾರದಲ್ಲಿ ಮೊದಲ ಹಂತದಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಸೇನೆಗೆ ಹಸ್ತಾಂತರವಾಗಲಿದೆ. 2022ರ ಸೆಪ್ಟೆಂಬರ್ ವೇಳೆಗೆ ಒಪ್ಪಂದದ ಎಲ್ಲ 36 ಯುದ್ಧ ವಿಮಾನಗಳು ವಾಯುಸೇನೆ ಕೂಡಿಕೊಳ್ಳಲಿವೆ. ಈ ಮೂಲಕ ಭಾರತೀಯ ವಾಯುಸೇನೆ ಮತ್ತಷ್ಟು ಬಲಿಷ್ಠವಾಗಲಿದೆ.