ಚೆನ್ನೈ (ತಮಿಳುನಾಡು): ಸಮಾಜ ಸುಧಾರಕ ಹಾಗೂ ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ಸ್ಥಾಪಕ ಪೆರಿಯಾರ್ ರಾಮಸ್ವಾಮಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸೂಪರ್ಸ್ಟಾರ್ ರಜನೀಕಾಂತ್, ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ನುಡಿದಿದ್ದಾರೆ.
ನಟ ರಜನೀಕಾಂತ್ ನೀಡಿರುವ ಹೇಳಿಕೆ ವಿರೋಧಿಸಿ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅವರು ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಸಂಘಟನೆಗಳ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಒಬ್ಬ ಜನಪ್ರಿಯ ನಟರಾಗಿ ಮತ್ತೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತಪ್ಪು. ಪೆರಿಯಾರ್ ಸಾಮಾಜಿಕ ಅನಿಷ್ಠಗಳ ವಿಮೋಚನೆಗಾಗಿ ಹೋರಾಡಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ, ಎಂದಿಗೂ ಪ್ರಸ್ತುತ. ಸಮಾಜಕ್ಕೆ ಅವರ ಕೊಡುಗೆ ಬಹಳಷ್ಟಿದೆ. ಆದರೆ, ರಜನೀಕಾಂತ್, ಅಂತಹ ಮಹನೀಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನಿಸಿದ್ದಾರೆ. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಇಷ್ಟಕ್ಕೂ ರಜನಿ ಹೇಳಿದ್ದೇನು?
1971ರಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ಮೌಢ್ಯತೆ ನಿರ್ಮೂಲನೆಗೆ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಆ ಫೋಟೋಗಳಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು ಎಂದು ತಮಿಳುನಾಡಿನ ತಮಿಳು ತುಘಲಕ್ ಪತ್ರಿಕೆಯ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ರಜನಿಕಾಂತ್ ಹೇಳಿದ್ದರು.
ಇಂದು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಸತ್ಯ. ಅದಕ್ಕೆ ಸಾಕ್ಷಿ 1971ರಲ್ಲಿ ಹಿಂದೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿದೆ ಎಂದು ಸಾಕ್ಷಿ ಸಮೇತ ತೋರಿಸಿದರು.