ನವದೆಹಲಿ: ಲಖನೌನ ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ.
ನ್ಯಾಯಾಲಯದ ತೀರ್ಪನ್ನು ಹೃದಯಪೂರಕವಾಗಿ ಸ್ವಾಗತಿಸುವುದಾಗಿ ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ. ರಾಮ ಜನ್ಮಭೂಮಿಯ ಹೋರಾಟದಲ್ಲಿ ನನ್ನ ವೈಯಕ್ತಿಕ ಭಾಗಿ ಹಾಗೂ ಬಿಜೆಪಿಯ ನಂಬಿಕೆ, ಬದ್ಧತೆಯನ್ನು ಈ ತೀರ್ಪು ಎತ್ತಿಹಿಡಿದೆ ಎಂದು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಪ್ರತಿಕ್ರಿಯಿಸಿ, ಇದೊಂದು ಐತಿಹಾಸಿಕ ತೀರ್ಪಾಗಿದ್ದು, ಆಯೋಧ್ಯೆಯಲ್ಲಿ 1992ರ ಡಿಸೆಂಬರ್ 6 ರಂದು ನಡೆದಿದ್ದ ಘಟನೆಯಲ್ಲಿ ಯಾವುದೇ ರೀತಿಯ ಪಿತೂರಿ ನಡೆಸಿಲ್ಲ ಎಂಬುದು ಸಾಬೀತಾಗಿದೆ. ನಮ್ಮ ಕಾರ್ಯಕ್ರಮಗಳು ಮತ್ತು ಱಲಿಗಳು ಯಾವುದೇ ಪಿತೂರಿಯಿಂದ ಕೂಡಿರಲಿಲ್ಲ. ಇದೀಗ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ನಾವು ಸಂತಸಗೊಂಡಿದ್ದು, ಪ್ರತಿಯೊಬ್ಬರು ಕಾತರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಸಿಬಿಐ ವಿಶೇಷ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ತಡವಾಗಿರಬಹುದು, ಆದರೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ, ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಉದ್ದೇಶಪೂರ್ವಕವಾಗಿ ಬಿಜೆಪಿ ಹಾಗೂ ವಿಹೆಚ್‌ಪಿ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ಕೋರ್ಟ್ ತೀರ್ಪಿನ ಮೂಲಕ ಇದು ಸಾಬೀತಾಗಿದೆ. ಹಿಂದೆ ಪ್ರಕರಣ ದಾಖಲಿಸಿದ್ದವರು ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.