ಮುಂಬೈ: ದೇಶದಲ್ಲಿ ನೂತನ ವಾಹನ ಕಾಯ್ದೆ ಜಾರಿಯಾದಾಗಿನಿಂದಲೂ ವಾಹನ ಸವಾರರು ಭಾರಿ ಪ್ರಮಾಣದ ದಂಡ ಕಟ್ಟುತ್ತಿದ್ದು, ಕೇಂದ್ರ ಸರ್ಕಾರದ ಈ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಇದೇ ವಿಷಯವಾಗಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಸ್ಪೀಡ್ ಆಗಿ ವಾಹನ ಚಲಾವಣೆ ಮಾಡಿದ್ದಕ್ಕಾಗಿ ತಾವು ಕೂಡ ಬಾಂದ್ರಾ-ವರ್ಲಿ ಪ್ರದೇಶದಲ್ಲಿ ದಂಡ ಕಟ್ಟಿರುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 100ದಿನ ಪೂರೈಕೆ ಮಾಡಿದ್ದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೆಚ್ಚು ದಂಡ ಕಟ್ಟುತ್ತಿರುವ ಬಗ್ಗೆ ಜನರು ದೂರು ನೀಡುತ್ತಿದ್ದಾರೆ. ಆದರೆ ನಾನು ಕೂಡ ದಂಡ ಕಟ್ಟಿದ್ದೇನೆ. ನನ್ನ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದ ಕಾರು ಓವರ್ ಸ್ಪೀಡ್ ಆಗಿ ಚಲಾವಣೆ ಮಾಡಿದ್ದರಿಂದ ದಂಡ ಕಟ್ಟಿರುವೆ ಎಂದು ತಿಳಿಸಿದರು.
ಜನರು ಸುರಕ್ಷಿತವಾಗಿ ಡ್ರೈವ್ ಹಾಗೂ ಶಿಸ್ತಿನಿಂದ ನಡೆದುಕೊಳ್ಳಲಿ ಎಂಬ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ರಸ್ತೆ ಅಪಘಾತದಂತಹ ಘಟನೆಗಳನ್ನ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸುಧಾರಣೆ ಮಾಡುವ ಉದ್ದೇಶದಿಂದ 1,2000 ಕೋಟಿ ರೂ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಳೆದ ತಿಂಗಳ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆ(2019) ಜಾರಿಗೊಳಿಸಲಾಗಿದ್ದು, ಇದಾದ ಬಳಿಕ ವಾಹನ ಸವಾರರು ರಸ್ತೆ ನಿಯಮ ಉಲ್ಲಂಘನೆ ಮಾಡಿ ಹೆಚ್ಚಿನ ದಂಡ ಕಟ್ಟುತ್ತಿದ್ದಾರೆ.