ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆಗೆ ಇಡೀ ದೇಶವೇ ಸಿದ್ಧತೆ ನಡೆಸುತ್ತಿದ್ದು, ಇತ್ತ ಭದ್ರತಾ ಇಲಾಖೆಗಳಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ವೈಮಾನಿಕ ದಾಳಿ ನಡೆಸುವ ಬೆದರಿಕೆಗಳು ಬಂದಿವೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ ಬಳಿಕ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಬೆದರಿಕೆಗಳು ಬರುತ್ತಿವೆ ಎಂದು ಮಾಹಿತಿ ನೀಡಿರುವ ಭದ್ರತಾ ಇಲಾಖೆಗಳು, ಈ ಬಾರಿ ಸ್ವಾತಂತ್ರ್ಯೋತ್ಸವದಂದು ಭಯೋತ್ಪಾದಕ ಸಂಘಟನೆಗಳು ವೈಮಾನಿಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿವೆ.
ದೆಹಲಿ ಪೊಲೀಸರು ಸ್ನೈಪರ್‌ಗಳು ಹಾಗೂ ವಿಮಾನ ವಿರೋಧಿ ವ್ಯವಸ್ಥೆಯನ್ನು ಅಳವಡಿಸಿದ್ದು, ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಾಳಿಯಲ್ಲಿ ಕಂಡುಬರುವ ಯಾವುದೇ ಅನುಮಾನಾಸ್ಪದ ವಸ್ತುಗಳ ಬಗ್ಗೆ ಅದು ತಕ್ಷಣ ಎಚ್ಚರಿಕೆ ನೀಡುತ್ತದೆ. ಅಲ್ಲದೇ ಕೆಂಪು ಕೋಟೆಯ ಮೇಲಿನ ವಾಯು ಪ್ರದೇಶವನ್ನು ವಿಮಾನ ಹಾರಾಟಕ್ಕೆ ನಿಷೇಧಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂಭಾವ್ಯ ವಾಯು ದಾಳಿ ಮುನ್ನೆಚ್ಚರಿಕಾ ಕ್ರಮವಾಗಿ, ಧ್ವಜಾರೋಹಣ ನಡೆಯಲಿರುವ ಐತಿಹಾಸಿಕ ಕೆಂಪುಕೋಟೆಯ ಆಗಸವನ್ನು ನೋ ಫ್ಲೈ ಝೋನ್ (ಯಾವುದೇ ವಿಮಾನ ಸಂಚಾರ ನಿಷಿದ್ಧ ಪ್ರದೇಶ) ಎಂದು ಘೋಷಿಸಲಾಗಿದೆ.
ಕೆಂಪು ಕೋಟೆ ಮತ್ತು ಅದರ ಸುತ್ತಮುತ್ತ ಐದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈಗಾಗಲೇ 300 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಜುಲೈ 24 ರಂದು ಕೇಂದ್ರ ಗೃಹ ಸಚಿವಾಲಯವು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸ್ವಾತಂತ್ರ್ಯ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಾಗ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಶನ್, ದೊಡ್ಡ ಮಟ್ಟದಲ್ಲಿ ಜನರು ಸೇರದಿರುವಂತೆ ಸೂಚಿಸಿದೆ. ಈ ಬಾರಿ ಶಾಲಾ ಮಕ್ಕಳಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.