ಅಸ್ಸೋಂ: 'ನಾನೊಬ್ಬ ಭಾರತೀಯ. ಭಾರತೀಯನಾಗಿ ಉಳಿಯಲು ಇಷ್ಟಪಡುತ್ತೀನಿ'. ಇದು ವಿದೇಶಿಗನೆಂಬ ಆರೋಪದ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ನಿವೃತ್ತ ಸೇನಾಧಿಕಾರಿ ಮೊಹಮ್ಮದ್ ಸನಾವುಲ್ಲಾ ಅವರು ಹೆಮ್ಮೆಯಿಂದ ಹೇಳಿದ ಮಾತು.
ಅಸ್ಸೋಂನ ಕಮ್ರಪ್ನ ವಿದೇಶಿ ನ್ಯಾಯಾಧಿಕರಣ ಇವರನ್ನು ವಿದೇಶಿಗ ಎಂದು ಘೋಷಿಸಿದ ಕಾರಣ, ಮೇ 28ರಂದು ಬಂಧಿಸಿ, ಗುವಾಹಟಿಯ ಕಾರಾಗೃಹದಲ್ಲಿರಿಸಲಾಗಿತ್ತು. ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ಅಸ್ಸೋಂ ಹೈಕೋರ್ಟ್ ಸನಾವುಲ್ಲಾರಿಗೆ ಜಾಮೀನು ಮಂಜೂರು ಮಾಡಿತ್ತು. ನಿನ್ನೆ ಜೈಲಿನಿಂದ ಹೊರಬಂದ ಅವರು, ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.
30 ವರ್ಷ ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಜಮ್ಮ ಮತ್ತು ಕಾಶ್ಮೀರದಲ್ಲಿ 2 ಬಾರಿ, ಇಂಫಾಲದಲ್ಲಿ ಒಂದು ಬಾರಿ ಕೆಲಸ ಮಾಡಿದ್ದೇನೆ. ನಾನೊಬ್ಬ ಭಾರತೀಯ, ಭಾರತೀಯನಾಗಿ ಉಳಿಯಲು ಇಷ್ಟಡುತ್ತೇನೆ. ನನಗೆ ಜಾಮೀನು ನೀಡಿದ ಹೈಕೋರ್ಟ್ಗೆ ಧನ್ಯವಾದಗಳು. ಅದೇ ಕೋರ್ಟ್ ನ್ಯಾಯ ನೀಡುತ್ತೆ ಎಂಬ ಭರವಸೆಯಲ್ಲಿದ್ದೀನಿ ಎಂದಿದ್ದಾರೆ.
ಕಾರಾಗೃಹದಲ್ಲಿ ನನ್ನಂತೆಯೇ ವಿದೇಶಿಗರು ಎಂಬ ಆರೋಪ ಹೊತ್ತ ಹಲವರಿದ್ದಾರೆ. ಕೆಲವರಿಗೆ ತುಂಬಾ ವಯಸ್ಸಾಗಿದೆ. ಮತ್ತೆ ಕೆಲವರದು ನನ್ನದೇ ಕಥೆ. ಅಲ್ಲಿಯದು ಭಯಾನಕ ಜೀವನ. ಇದಕ್ಕೆಲ್ಲಾ ಪರಿಹಾರ ಅಗತ್ಯವಿದೆ ಎಂದಿದ್ದಾರೆ.
ವಿದೇಶಿ ನ್ಯಾಯಾಧಿಕರಣ ಇವರನ್ನು ವಿದೇಶಿಗ ಎಂದು ಘೋಷಿಸಿ, ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ ಎಂಬ ಆರೋಪ ಮಾಡಿರುವುದು ಸಾಕಷ್ಟು ಸುದ್ದಿಯಾಗಿದೆ. ಇದರ ಸತ್ಯಾಸತ್ಯತೆಯ ಪರಿಶೀಲನೆಯೂ ನಡೆಯುತ್ತಿದೆ. ಸದ್ಯ 20,000 ರೂ.ಗಳ ಬಾಂಡ್ ಸಲ್ಲಿಸಿ ಷರತ್ತುಬದ್ಧ ಜಾಮೀನು ಮೂಲಕ ಸನಾವುಲ್ಲಾ ಹೊರಬಂದಿದ್ದಾರೆ. ಅಲ್ಲದೆ, ರಾಷ್ಟ್ರೀಯ ಪೌರತ್ವ ದಾಖಲೆ (NRC) ಅಧಿಕಾರಿಗಳಿಗೂ ಕೋರ್ಟ್ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ. ಸನಾವುಲ್ಲಾ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದವರು. ತಮ್ಮ ಸೇವೆಗಾಗಿ ರಾಷ್ಟ್ರಪತಿಗಳಿಂದ ಮೆಡಲ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.