ಹೈದರಾಬಾದ್: ಮಲೇರಿಯಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಅಮೆರಿಕದ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಭಾರತವು ರಫ್ತು ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರಿರುವ ಮಧ್ಯೆಯೇ, ಈ ಔಷಧವು ಹಲವು ಅಡ್ಡ ಪರಿಣಾಮಗಳನ್ನೂ ಹೊಂದಿರುವುದು ತಿಳಿದುಬಂದಿದೆ.
ರಕ್ತದೊತ್ತಡ ಇಳಿಕೆ ಮತ್ತು ಮಾಂಸಖಂಡ ಅಥವಾ ನರ ಹಾನಿ ಮತ್ತು ಕಣ್ಣಿನ ದೃಷ್ಟಿಗೆ ಹಾನಿಯಂಥ ಅಡ್ಡ ಪರಿಣಾಮಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಆದರೆ, ಎಚ್‌ಸಿಕ್ಯೂಗೆ ಸಂಬಂಧಿಸಿದಂತೆ ಪ್ರಮುಖ ಅಪಾಯವೆಂದರೆ, ರೆಟಿನಲ್ ಟಾಕ್ಸಿಸಿಟಿ. ಸದ್ಯದ ಮಟ್ಟಿಗೆ ರೋಗನಿರೋಧಕ ಶಕ್ತಿಯನ್ನೇ ಆಧರಿಸಿ ದಾಳಿ ಮಾಡುವ ರೋಗಗಳನ್ನು ತಡೆಯಲು ಎಚ್‌ಸಿಕ್ಯೂ ಹೊರತುಪಡಿಸಿ ಇನ್ಯಾವುದೇ ಪರಿಣಾಮಕಾರಿ ಔಷಧವಿಲ್ಲ. ಸದ್ಯ ಇದರ ಡೋಸೇಜ್ ಪ್ರಮಾಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿರುವುದರಿಂದ ಗೊಂದಲ ಉಂಟಾಗಿದೆ.
ಸಾಮಾನ್ಯವಾಗಿ ಉರಿಯೂತದ ರೋಗಗಳಿಗೆ ದಿನಕ್ಕೆ ಎರಡು ಬಾರಿ 200 ಮಿ.ಗ್ರಾಂ ನೀಡಲಾಗುತ್ತದೆ. ಈ ಡೋಸ್ ಕೊಡಬೇಕಾದರೆ ರೋಗಿಯು 176 ಪೌಂಡ್ ತೂಕ ಹೊಂದಿರಬೇಕು. ಆರಂಭಿಕ ವರದಿಗಳ ಪ್ರಕಾರ ಕೋವಿಡ್ 19 ರೋಗಿಗಳಿಗೆ ದಿನಕ್ಕೆ 600-800 ಮಿ.ಗ್ರಾಂ ಡೋಸೇಜ್ ಶಿಫಾರಸು ಮಾಡಲಾಗುತ್ತದೆ. ಅಂದರೆ, ಇದು ಸಾಮಾನ್ಯಕ್ಕಿಂತ 3-4 ಪಟ್ಟು ಹೆಚ್ಚಾಗಿರುತ್ತದೆ. ಇದರಿಂದ ರೆಟಿನೋಪತಿ ಕಾಣಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಕೋವಿಡ್ 19 ಹೊಂದಿರುವ ರೋಗಿಗಳಲ್ಲಿ ಇತರ ರೋಗಗಳೂ ಇರಬಹುದು.
ಸಂಶೋಧನೆಗಳ ಪ್ರಕಾರ, ಎಚ್‌ಸಿಕ್ಯೂ ತ್ಯಾಜ್ಯವು ಮೂತ್ರದ ಮೂಲಕ ಹೊರಹೋಗುವುದರಿಂದ ಕಿಡ್ನಿ ವೈಫಲ್ಯ ಹೊಂದಿರುವ ರೋಗಿಗಳಲ್ಲಿ ಇದರ ಅಡ್ಡ ಪರಿಣಾಮಗಳ ರಿಸ್ಕ್ ಹೆಚ್ಚಾಗಿದೆ. ಎಚ್‌ಸಿಕ್ಯೂ ಹೆಚ್ಚಿನ ಡೋಸ್ ಸೇವಿಸಿದಾಗ, ವಯೋ ಸಂಬಂಧಿ ಮೆಕ್ಯುಲರ್ ಡಿಜನರೇಶನ್ ಹೊಂದಿರುವ ರೋಗಿಗಳಿಗೆ ಮಾರಣಾಂತಿಕವೂ ಆಗಬಹುದು. ಲ್ಯಾಬ್ ಟೆಸ್ಟ್‌ಗಳಲ್ಲಿ ಕಂಡುಬಂದಂತೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಸೆಲ್‌ಗಳಿಗೆ ಕೊರೊನಾವೈರಸ್ ಸೇರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಕಳೆದ ವಾರ ನೇಚರ್ ಮೆಡಿಸಿನ್ ನಿಯತಕಾಲಿಕದಲ್ಲಿ ವರದಿ ಮಾಡಲಾಗಿದೆ. ಆದರೆ ಈ ಔಷಧವು ಎಲ್ಲ ವ್ಯಕ್ತಿಗಳಿಗೂ ಇದೇ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗದು.
ಚೀನಾದ ಐಸಿಎಂಆರ್‌ಎ ವರದಿಯ ಪ್ರಕಾರ, 10 ಆಸ್ಪತ್ರೆಗಳಲ್ಲಿನ 100 ಕ್ಕೂ ಹೆಚ್ಚು ರೋಗಿಗಳಲ್ಲಿ ಕ್ಲೋರೋಖಿನ್ ನೆರವಾಗಿದೆ. ಆದರೆ, ಈ ರೋಗಿಗಳ ರೋಗದ ತೀವ್ರತೆ ವಿಭಿನ್ನವಾಗಿತ್ತು. ಹೀಗಾಗಿ ಇದರಲ್ಲಿ ಒಬ್ಬೊಬ್ಬರಿಗೂ ಒಂದೊಂದು ಪ್ರಮಾಣದಲ್ಲಿ ಇದನ್ನು ನೀಡಲಾಗಿತ್ತು. ಇದೇ ರೋಗಿಗಳು ಈ ಔಷಧ ಇಲ್ಲದೆಯೂ ಗುಣವಾಗಬಹುದಿತ್ತು. ಯಾಕೆಂದರೆ, ಈ ಅಧ್ಯಯನದಲ್ಲಿ ಹೋಲಿಕೆ ನಡೆದಿಲ್ಲ. ಇನ್ನೊಂದೆಡೆ ಫ್ರಾನ್ಸ್‌ನಲ್ಲಿ ನಡೆದ ಅಧ್ಯಯನ ಇನ್ನೂ ಹೆಚ್ಚು ಗಮನ ಸೆಳೆದಿದೆ.
ಕೊರೊನಾವೈರಸ್ ಸೋಂಕು ಹೊಂದಿರುವುದು ಖಚಿತವಾದ 26 ರೋಗಿಗಳಿಗೆ ಮತ್ತು ಗುಣಲಕ್ಷಣ ಇಲ್ಲದ ಕೆಲವರಿಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ನೀಡಲಾಗಿತ್ತು. ಆರು ಜನರಿಗೆ ಆಂಟಿಬಯಾಟಿಕ್ ಅಜಿತ್ರೋಮೈಸಿನ್ ಅನ್ನು ಕೂಡ ನೀಡಲಾಗಿತ್ತು. 26 ರ ಪೈಕಿ ಕೆಲವರನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸಿಲ್ಲ. ಯಾಕೆಂದರೆ ಅವರು ಅಧ್ಯಯನವನ್ನು ಪೂರ್ಣಗೊಳಿಸಿಲ್ಲ.
ಈ ಪೈಕಿ, ಮೂವರಲ್ಲಿ ರೋಗದ ತೀವ್ರತೆ ಹೆಚ್ಚಳವಾಗಿ, ಇವರನ್ನು ಇಂಟೆನ್ಸಿವ್ ಕೇರ್‌ಗೆ ಕಳುಹಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯು ಟೆಸ್ಟ್‌ನಲ್ಲಿ ನೆಗೆಟಿವ್ ತೋರಿಸಿದ ಮರುದಿನ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ರೋಗಿಗೆ ವಾಂತಿಯಿಂದಾಗಿ ಚಿಕಿತ್ಸೆ ನಿಲ್ಲಿಸಲಾಗಿದೆ. ಆರು ದಿನಗಳ ನಂತರ, ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಅಜಿತ್ರೋಮೈಸಿನ್ ಅನ್ನು ಪಡೆದಿಲ್ಲದ ಯಾವುದೇ ರೋಗಿಯಲ್ಲೂ ಮೂಗಿನ ಒಳ ಕೆಳಭಾಗದ ಕಫದಲ್ಲಿ ವೈರಸ್ ಕಂಡುಬಂದಿಲ್ಲ. ಮಲೇರಿಯಾ ಔಷಧ ಸೇವಿಸಿದ ಶೇ. 57 ರಷ್ಟು ಜನರು ಮತ್ತು ಯಾವುದೇ ಔಷಧ ಸೇವಿಸಿಲ್ಲದ ಶೇ. 12.5 ರಷ್ಟು ಜನರಲ್ಲೂ ಯಾವುದೇ ವೈರಸ್ ಪತ್ತೆಯಾಗಿಲ್ಲ.
ಇದು ಸಂತಸದ ಸುದ್ದಿಯೇ ಆದರೂ, ಈ ಪ್ರಯೋಗದಲ್ಲಿ ಫಲಿತಾಂಶಗಳ ಮೇಲೆ ಹಲವು ಅಂಶಗಳೂ ಪರಿಣಾಮ ಬೀರಿರಬಹುದು. ಇವರಿಗೆ ಚಿಕಿತ್ಸೆ ನೀಡುವಾಗ ವಯಸ್ಸು, ಲಿಂಗ ಮತ್ತು ಆರೋಗ್ಯ ಸ್ಥಿತಿಗಳೆಲ್ಲವೂ ಚಿಕಿತ್ಸೆಯಲ್ಲಿ ಅವರ ಚೇತರಿಕೆಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ, ಕೋವಿಡ್ 19 ರೋಗಿಗಳಿಗೆ ಎಚ್‌ಸಿಕ್ಯೂ ಅನ್ನು ದೀರ್ಘಕಾಲದವರೆಗೆ ಶಿಫಾರಸು ಮಾಡಿದರೆ, ಕಣ್ಣಿನ ತಪಾಸಣೆ ಮಾಡುವುದನ್ನೂ ವೈದ್ಯರು ಪರಿಗಣಿಸಬೇಕಾಗುತ್ತದೆ.