ನವದೆಹಲಿ: ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮದ್ದು ಕೊರೊನಾ ಸೋಂಕಿಗೆ ಪರಿಣಾಮಕಾರಿ ಮದ್ದೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಜಾಗತಿಕವಾಗಿ ಈ ಔಷಧಕ್ಕೆ ಬೇಡಿಕೆ ಬಂದಿದೆ. ತಜ್ಞರೊಬ್ಬರು ನೀಡಿರುವ ಮಾಹಿತಿಯು ಅದನ್ನು ಒತ್ತಿ ಹೇಳುವಂತಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ವೈದ್ಯರು ಮತ್ತು ಕೊರೊನಾ ಪರೀಕ್ಷೆ ನಡೆಸುವ ಲ್ಯಾಬ್ನವರು ಹೊರತು ಇತರರು ಬಳಸಬಾರದು ಎಂದು ಐಸಿಎಂಆರ್ ಹಿರಿಯ ವಿಜ್ಞಾನಿ ರಾಮನ್ ಆರ್. ಗಂಗಖೇಡ್ಕರ್ ಹೇಳಿದ್ದಾರೆ.
ಕೊರೊನಾ ಸರ್ವವ್ಯಾಪಿ ಸೋಂಕಿನಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಗಳ ಅಗತ್ಯತೆಗಳನ್ನು ಪೂರೈಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆರೋಗ್ಯ ಇಲಾಖೆ ಅತ್ಯಗತ್ಯ ಔಷಧವೆಂದು ಪರಿಗಣಿಸಿದೆ. ಅದರ ಮಾರಾಟ ಮತ್ತು ವಿತರಣೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯ ಕುರಿತು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆ ಪ್ರತಿಕ್ರಿಯಿಸಿದ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಗಂಗಖೇಡ್ಕರ್, ಇದನ್ನು ಎಲ್ಲರೂ ಬಳಸಬಾರದು. ವೈದ್ಯರು ಮತ್ತು ಕೊರೊನಾ ಪರೀಕ್ಷೇ ನಡೆಸುವ ಲ್ಯಾಬ್ಗಳಿಗೆ ಕೆಲವು ಮಾನದಂಡಗಳನ್ನು ಅನುಸರಿಸಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.