ಹೈದರಾಬಾದ್: ಇಲ್ಲಿನ ಗ್ಲ್ಯಾಂಡ್ ಫಾರ್ಮಾ ಕಂಪನಿಯು ಹೈದರಾಬಾದ್ ನೆಹರೂ ಮೃಗಾಲಯದ 27 ಕಾಡುಪ್ರಾಣಿಗಳನ್ನು 20 ಲಕ್ಷ ರೂ. ನೀಡುವ ಮೂಲಕ ಒಂದು ವರ್ಷಕ್ಕೆ ದತ್ತು ಪಡೆದಿದೆ.
ಗ್ಲ್ಯಾಂಡ್ ಫಾರ್ಮಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೊತ್ತ ಅಧಿಕಾರಿಗಳು ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ, ಮೃಗಾಲಯದ ಉಪ ಮೇಲ್ವಿಚಾರಕರಾದ ಎ.ನಾಗಮಣಿ ಅವರಿಗೆ ಚೆಕ್ ನೀಡಿದರು. ದತ್ತು ಪಡೆದ ಪ್ರಾಣಿಗಳಲ್ಲಿ ದೊಡ್ಡ ಬೆಕ್ಕುಗಳು, ಜಿರಾಫೆ, ಹಿಪೋಪೊಟಾಮಸ್, ಚಿರತೆ, ಜಿಂಕೆಗಳು, ಆಸ್ಟ್ರಿಚ್, ಫ್ಲೆಮಿಂಗೊ, ಹಾರ್ನ್‌ಬಿಲ್ ಮತ್ತು ರಣಹದ್ದುಗಳಂತಹ ಪಕ್ಷಿಗಳೂ ಸಹ ಇವೆ
ಈ ಕುರಿತು ಮಾತನಾಡಿದ ಎ.ನಾಗಮಣಿ, ಮಾರ್ಚ್ 2020ರಿಂದ ಅಕ್ಟೋಬರ್ 5ರವರೆಗೆ ಕೊರೊನಾದಿಂದಾಗಿ ಮೃಗಾಲಯವನ್ನು ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಈ ಸಂದರ್ಭ ಹೆಚ್ಚಿನ ಆದಾಯವಿಲ್ಲದಿದ್ದರೂ ಮೃಗಾಲಯದ ನೌಕರರು ತಮ್ಮ ಕರ್ತವ್ಯವನ್ನು ನಿಯಮಿತವಾಗಿ ನಿರ್ವಹಿಸಿ, ಪ್ರಾಣಿಗಳ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿದ್ದಾರೆ ಎಂದು ನಾಗಮಣಿ ತಿಳಿಸಿದರು.
ಪ್ರಾಣಿಗಳ ಸಂರಕ್ಷಣೆಯ ಭಾಗವಾಗಲು ಜನರು ಮುಂದೆ ಬಂದು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಅವರು ದಾನಿಗಳಲ್ಲಿ ಮನವಿ ಮಾಡಿದರು.