ಹೈದರಾಬಾದ್ : ವಿಮಾನ ನಿಲ್ದಾಣಗಳಿಗೆ ಮಾನ್ಯತೆ ನೀಡುವ ಇಂಟರ್ನ್ಯಾಷನಲ್ ಏರ್ಪೋರ್ಟ್ ಕೌನ್ಸಿಲ್ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮಾನ್ಯತೆ ನೀಡಿದೆ.
ಇಂಟರ್ನ್ಯಾಷನಲ್ ಏರ್ಪೋರ್ಟ್ ಕೌನ್ಸಿಲ್ ವಿಶ್ವ ಮಟ್ಟದ ಸಂಸ್ಥೆಯಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಮಾನ್ಯತೆ ನೀಡುತ್ತದೆ. ಏಷಿಯಾ ಪೆಸಿಫಿಕ್ ಭಾಗದಲ್ಲಿ ಜಿಎಂಆರ್ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಮಾನ್ಯತೆ ನೀಡಿದೆ ಎಂದು ಎಸಿಐ ವರ್ಲ್ಡ್ ಟ್ವೀಟ್ ಮಾಡಿದೆ.
ಕೊರೊನಾ ನಂತರದಲ್ಲಿ ವಿಮಾನಯಾನ ಸೇವೆ ಆರಂಭಕ್ಕೆ ತೆಗೆದುಕೊಂಡ ಸುರಕ್ಷಾ ಕ್ರಮಗಳನ್ನು ಆಧರಿಸಿದ, ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ (ಐಸಿಎಒ) ಹಾಗೂ ಕೌನ್ಸಿಲ್ ಏವಿಯೇಷನ್ ರಿಕವರಿ ಟಾಸ್ಕ್ ಫೋರ್ಸ್(ಕಾರ್ಟ್) ಶಿಫಾರಸುಗಳೊಂದಿಗೆ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಈ ರೀತಿಯ ಮಾನ್ಯತೆ ನೀಡಲಾಗಿದೆ.
ಎಸಿಐ ವರದಿಯ ಪ್ರಕಾರ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರದೇಶ, ವಿಮಾನ ನಿಲ್ದಾಣದಿಂದ ಹೊರಡುವ ಪ್ರದೇಶ ಹಾಗೂ ವಿಮಾನ ನಿಲ್ದಾಣಕ್ಕೆ ಇರುವ ಸಾರಿಗೆ ಸೇವೆ, ವಿಮಾನ ನಿಲ್ದಾಣದೊಳಗಿನ ಆಹಾರ ಮತ್ತು ಪಾನೀಯ ಸೇವೆ, ಎಸ್ಕಲೇಟರ್ಗಳು, ಎಲಿವೇಟರುಗಳು, ವಿಶ್ರಾಂತಿ ಕೊಠಡಿಗಳು, ಸೌಲಭ್ಯಗಳು, ಸಾಮಾನು ಸರಂಜಾಮುಗಳ ನಿರ್ವಹಣೆ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಹಿಂದಿನ ತಿಂಗಳು ಸುಮಾರು 16 ಸಾವಿರ ಪ್ರಯಾಣಿಕರು ಸುಮಾರು 170 ದೇಶೀಯ ಪ್ರಯಾಣಗಳ ಮೂಲಕ ಈ ವಿಮಾನ ನಿಲ್ದಾಣವನ್ನು ಬಳಸಿಕೊಂಡಿದ್ದರು. ಈಗ ಸದ್ಯಕ್ಕೆ ಸುಮಾರು 50 ಮಾರ್ಗಗಳಿಗೆ ಈ ವಿಮಾನ ನಿಲ್ದಾಣದಿಂದ ಸಂಚಾರ ನಡೆಯುತ್ತಿದೆ.