ಸಂಗಾರೆಡ್ಡಿ: ಹೆಂಡ್ತಿ ತಲೆಯನ್ನು ಕೊಡಲಿಯಿಂದ ಕಡಿದು ವ್ಯಕ್ತಿಯೊಬ್ಬರ ಮನೆ ಬಾಗಿಲಿಗೆ ಬಿಸಾಡಿರುವ ಘಟನೆ ಇಲ್ಲಿನ ನಾರಾಯಣಖೇಡ್ ತಾಲೂಕಿನಲ್ಲಿ ಬುಧವಾರ ನಡೆದಿದೆ.
ಅನಂತಸಾಗರ್ ನಿವಾಸಿ ಜಾರ್ರು ಸಾಯಿಲು ಮತ್ತು ಅನೂಪಮ ದಂಪತಿ ಮಧ್ಯೆ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು. ಈ ದಂಪತಿಗೆ ಶ್ರೀಕಾಂತ್ ಎಂಬ ಮಗನಿದ್ದು, ಆತ ಹೈದರಾಬಾದ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಾಯಿಲು ಗ್ರಾಮದಲ್ಲಿ ವ್ಯವಸಾಯ ಮಾಡುತ್ತಲೇ ಬೇಸಿಗೆ ಕಾಲದಲ್ಲಿ ಹೈದರಾಬಾದ್ನಲ್ಲಿ ಕಬ್ಬಿನ ರಸ ಮಾರುವ ಬಂಡಿ ಇಟ್ಟುಕೊಂಡಿದ್ದಾನೆ. ಹೈದರಾಬಾದ್ಗೆ ತೆರಳಿದ್ದಾಗ ಹೆಂಡ್ತಿ ಗ್ರಾಮದ ನಿವಾಸಿಯೊಬ್ಬನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಸಾಯಿಲುಗೆ ಮೂಡಿದೆ. ಈ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತಂತೆ.
ಬುಧವಾರ ಮಧ್ಯ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಈ ವೇಳೆ ಸಾಯಿಲು ಕೊಡೊಲಿಯಿಂದ ತನ್ನ ಹೆಂಡ್ತಿಯ ರುಂಡವನ್ನು ಕಡಿದಿದ್ದಾನೆ. ಬಳಿಕ ಆಕೆಯ ರುಂಡವನ್ನು ಮೂರನೇ ವ್ಯಕ್ತಿಯ ಮನೆಯ ಮುಂದೆ ಬಿಸಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.