ಕುಕ್ಕಟ್ಪಲ್ಲಿ(ತೆಲಂಗಾಣ): ಮದುವೆಯಾಗಿ ಹೆಂಡ್ತಿ ಜತೆ ಸಂಸಾರ ಮಾಡುವ ಬದಲು ವಿವಾಹೇತರ ಸಂಬಂಧ ಬೆಳೆಸಿದ ಗಂಡನಿಗೆ ಪತ್ನಿ ಹಿಗ್ಗಾಮುಗ್ಗಾ ಗೂಸಾ ನೀಡಿರುವ ಘಟನೆ ತೆಲಂಗಾಣದ ಕುಕ್ಕಟ್ಪಲ್ಲಿಯಲ್ಲಿ ನಡೆದಿದೆ.
ಸೌಜನ್ಯ ಮತ್ತು ಲಕ್ಷ್ಮಣ್ ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರೀತಿಯ ಸಂಕೇತವಾಗಿ ಮುದ್ದಾದ ಮಗುವಿದೆ. ಈ ಚಿಕ್ಕ ಕುಟುಂಬ ಮಂಚಿರಿಲ್ ಜಿಲ್ಲೆಯ ಕೊಮ್ಮುಗುಡೆಮ್ನವರಾಗಿದ್ದು, ಹೈದರಾಬಾದ್ನ ಕುಕ್ಕಟ್ಪಲ್ಲಿಯಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಲಕ್ಷ್ಮಣ್ ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು. ಇದರ ಪೋಟೋ ನೋಡಿರುವ ಪತ್ನಿ ಸೌಜನ್ಯ ಗಂಡನ ಹತ್ತಿರ ಯಾರು ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರಿಸಿರುವ ಗಂಡ, ಮದುವೆಯಾಗುವುದಕ್ಕೂ ಮುಂಚಿತವಾಗಿ ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗಿನ ಪೋಟೋ ಎಂದು ಸಮಜಾಯಿಷಿ ನೀಡಿದ್ದಾನೆ.
ಆದರೆ ಪ್ರಗತಿ ನಗರದಲ್ಲಿರುವ ಮಹಿಳೆ ಮನೆಯಲ್ಲಿ ಲಕ್ಷ್ಮಣ್ ರೆಡ್ ಹ್ಯಾಂಡ್ ಆಗಿ ಆಕೆಯೊಂದಿಗೆ ಸಿಕ್ಕಿಹಾಕಿಕೊಂಡಿದ್ದು, ಅಲ್ಲಿಗೆ ತೆರಳಿರುವ ಪತ್ನಿ ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಜತೆಗೆ ತನ್ನ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಆತನ ನಿಜ ಬಣ್ಣ ಬಯಲಾಗಿದೆ. ಲಕ್ಷ್ಮಣ್ ಜತೆ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಗಂಡನನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು ಎಂದು ತಿಳಿದು ಬಂದಿದೆ.