ನವದೆಹಲಿ: ಅಂದಿನ ಗೃಹ ಸಚಿವರಾಗಿದ್ದ ಪಿ.ವಿ.ನರಸಿಂಹರಾವ್ ಅವರು ಐಕೆ ಗುಜ್ರಾಲ್ ನೀಡಿದ ಸಲಹೆಯಂತೆ ನಡೆದುಕೊಂಡಿದ್ದರೆ, ಸಿಖ್ ಗಲಭೆಯನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಐಕೆ ಗುಜ್ರಾಲ್ 100ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984ರಲ್ಲಿ ಸಿಖ್ ದುರಂತ ನಡೆದ ದಿನವೇ ಅಂದಿನ ಪ್ರಧಾನಿ ಗುಜ್ರಾಲ್ ಅವರು ನರಸಿಂಹರಾವ್ ಬಳಿ ಪರಿಸ್ಥಿತಿ ಗಂಭೀರವಾಗಿದೆ. ಆದಷ್ಟು ಬೇಗ ಸೇನೆ ವಾಪಸ್ ಕರೆಸಿ ಪರಿಸ್ಥಿತಿ ತಿಳಿಗೊಳಿಸಲು ಸಲಹೆ ನೀಡಿದ್ದರು. ಆದರೆ, ನರಸಿಂಹರಾವ್ ಅವರು ಕಿವಿಗೆ ಹಾಕಿಕೊಂಡಿರಲಿಲ್ಲ ಎಂದು ಹೇಳಿದರು.
ಗುಜ್ರಾಲ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಹತ್ಯಾಕಾಂಡವನ್ನು ತಪ್ಪಿಸಬಹುದಿತ್ತು ಎಂದ ಅವರು, ಗುಜ್ರಾಲ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು. ನಂತರ ಅವರನ್ನು ಯೋಜನಾ ಆಯೋಗಕ್ಕೆ ರಾಜ್ಯ ಸಚಿವರಾಗಿ ನೇಮಿಸಲಾಯಿತು. ಆಗ ನಾನು ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರನಾಗಿದ್ದೆ. ಅಂದಿನಿಂದ ನಮ್ಮ ಸಂಬಂಧ ಬೆಳೆಯಿತು ಎಂದು ಸಿಂಗ್, ಗುಜ್ರಾಲ್ ಅವರೊಂದಿಗಿನ ಸಂಬಂಧದ ಬಗ್ಗೆ ವಿವರಿಸಿದರು.
1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ 3000 ಜನರನ್ನು ಕೊಲೆ ಮಾಡಲಾಗಿತ್ತು.