ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಏಮ್ಸ್ ಆಸ್ಪತ್ರೆಯಿಂದ ಇಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ಆಗಸ್ಟ್ 2 ರಂದು ಶಾಗೆ ಕೋವಿಡ್ ಸೋಂಕು ಇರುವುದು ದೃಢವಾಗಿತ್ತು. ಆ ವೇಳೆ ಅವರು ಗುರುಗ್ರಾಂನ ಮೆಡಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೋವಿಡ್ನಿಂದ ಚೇತರಿಸಿದ ಬಳಿಕ ಸಚಿವರನ್ನು ಆಗಸ್ಟ್ 14 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 13 ರಂದು ಸಂಪೂರ್ಣ ವೈದ್ಯಕೀಯ ಪರೀಕ್ಷೆಗಾಗಿ ಶಾ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ನಡೆದು ಶಾ ಗುಣಮುಖರಾದ ಬಳಿಕ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನದ ಉಳಿದ ಕಲಾಪಗಳಿಗೆ ಶಾ ಹಾಜರಾಗಬಹುದಾಗಿದೆ.