ಲಕ್ನೋ: ವಿಶ್ವ ಹಿಂದೂ ಮಹಾಸಭಾ ಮುಖಂಡ ರಂಜಿತ್ ಬಚ್ಚನ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ನವೀನ್ ಅರೋರಾ ತಿಳಿಸಿದ್ದಾರೆ.
ಇನ್ನು ಅಖಿಲ್ ಭಾರತ್ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರು, ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ನಡೆದ ಹಿಂದೂ ಸಂಘಟನೆಯ ಎರಡನೇ ಮುಖಂಡನ ಹತ್ಯೆಯಾಗಿದೆ. ಈ ಮೊದಲು ಹಿಂದೂ ಸಮಾಜ ಪಕ್ಷದ ಮುಖಂಡ ಕಮಲೇಶ್ ತಿವಾರಿ ಅವರನ್ನು, ಅಕ್ಟೋಬರ್ 2019ರಲ್ಲಿ ಲಖನೌದಲ್ಲಿನ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಇಂತಹ ಘಟನೆಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಒಡ್ಡುತ್ತವೆ ಎಂದು ಹೇಳಿದ್ದಾರೆ.
ಅವರಿಗೆ ಬೇರೆ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಹೆಚ್ಚು ಮುಖ್ಯವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಅವರು ನೋಡಬೇಕಿದೆ ಎಂದರು. ಕಳೆದ ತಿಂಗಳು ಬಚ್ಚನ್ ಅವರೊಂದಿಗೆ ಮಾತನಾಡಿದ್ದೆವು. ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಆದರೆ ಅಪಾಯಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.