ಮುಂಬೈ : ವಲಸಿಗರನ್ನು ತವರಿಗೆ ತಲುಪಿಸಿ ದೇಶಾದ್ಯಂತ ಚರ್ಚೆಯಾಗುತ್ತಿರುವ ನಟ ಸೋನು ಸೂದ್ ತಾವು ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸೋನು ಸೂದ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುವ ದೃಷ್ಟಿಯಿಂದ ಈ ರೀತಿ ಸೇವೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸೂದ್, "ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ವಲಸಿಗರ ಮೇಲಿನ ಪ್ರೀತಿಯಿಂದ ನಾನು ಇದನ್ನು ಮಾಡುತ್ತಿದ್ದೇನೆ. ಅವರ ಕುಟುಂಬಗಳೊಂದಿಗೆ ಮತ್ತೆ ಅವರು ಸೇರಲಿ ಎಂದು ನಾನು ಈ ಕೆಲಸ ಮಾಡುತ್ತಿದ್ದೇನೆ " ಎಂದು ಸೂದ್ ಹೇಳಿದ್ದಾರೆ.
ಇತ್ತೀಚೆಗೆ ಸೋನು ಸೂದ್ ಅವರನ್ನು ಟೀಕಿಸಿದ್ದ ಶೀವಸೇನೆ ಸಂಸದ ಸಂಜಯ್ ರಾವತ್, "ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ, ಬಿಜೆಪಿಯು ಸೋನ್ ಸೂದ್ ಅವರನ್ನು ಮುಂದೆಬಿಟ್ಟಿರುವ ಸಾಧ್ಯತೆಯಿದೆ. ಬೆಜೆಪಿಯ ಸೂಚನೆ ಮೇರೆಗೆ ಸೋನು ಸೂದ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದು ಬಿಜೆಪಿಯವರು ಹಣ ಕೊಟ್ಟು ನಡೆಸುತ್ತಿರುವ ಕುತಂತ್ರ" ಎಂದು ಆರೋಪಿಸಿದ್ದರು.
ಸಿಎಂ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ ನಂತರ ಸಂಜಯ್ ರಾವತ್ ಟೀಕೆಗೆ ಪ್ರತಿಕ್ರಿಸಿರುವ ಸೋನು ಸೂದ್, ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ತಮ್ಮ ಕೆಲಸಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದು ಪಕ್ಷ ಅಥವಾ ಒಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಸ್ಯೆಯಲ್ಲಿರುವವರಿಗೆ ನಾವು ಸಹಾಯ ಮಾಡಬೇಕು, ಇಲ್ಲಿ ವ್ಯಕ್ತಿ, ಪಕ್ಷ ಮುಖ್ಯವಾಗುವುದಿಲ್ಲ ಎಂದಿದ್ದಾರೆ.