ವಡೋದರಾ: ಕಳೆದ ಕೆಲ ದಿನಗಳಿಂದ ಗುಜರಾತ್ನ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರ ಮಧ್ಯೆ ಕೆಲವು ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಅನೇಕರು ಮನೆ ಕಳೆದುಕೊಂಡಿದ್ದಾರೆ.
ಸಾರ್ವಜನಿಕರ ರಕ್ಷಣೆಗೆ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಜಲಚರಗಳು ಪ್ರವಾಹದಲ್ಲಿ ತೇಲಿಕೊಂಡು ಬರುತ್ತಿವೆ. ರಸ್ತೆ ತುಂಬಾ ಮಳೆನೀರು ಹರಿಯುತ್ತಿದ್ದು ಮೊಣಕಾಲಿನವರೆಗೂ ನೀರು ತುಂಬಿ ನಿಂತಿದೆ. ಕಳೆದ 24 ಗಂಟೆಗಳಲ್ಲಿ 442 ಮಿ.ಮೀ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರ ಮಧ್ಯೆ ಪಿಎಸ್ಐ ಗೋವಿಂದ್ ಚವ್ಹಾಣ ಎರಡು ವರ್ಷದ ಮಗುವನ್ನು ಪ್ಲಾಸ್ಟಿಕ್ ಟಬ್ನಲ್ಲಿಟ್ಟು ತಲೆ ಮೇಲೆ ಹೊತ್ತು ನೀರಿಗಿಳಿದು ಜೀವ ರಕ್ಷಣೆ ಮಾಡಿದ್ದಾರೆ.
ಪ್ರತಿದಿನ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ, ವಿಶ್ವಮಿತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವ ಕಾರಣ, ಜನಜೀವನ ಅಸ್ತವ್ಯಸ್ತವಾಗಿದೆ.