ಕೋವಿಡ್ 19 ವೈರಸ್ ತಡೆಯಲು ಈವರೆಗೆ ಅತ್ಯಂತ ಪರಿಣಾಮಕಾರಿ ಔಷಧ ಎಂದು ಪರಿಗಣಿಸಲಾದ ರೆಮ್ಡೆಸಿವಿರ್ ಅನ್ನು ತುರ್ತು ಬಳಕೆಗೆ ಅನುಮೋದನೆ ನೀಡುತ್ತಿದ್ದಂತೆಯೇ, ಕೆಮಿಸ್ಟ್ಗಳು ಮತ್ತು ಡೀಲರ್ಗಳು ಹಣದ ದಾಹಕ್ಕೆ ಬಿದ್ದಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ದೆಹಲಿಯ ಇಬ್ಬರು ಅಧಿಕೃತ ಮಾರಾಟಗಾರರ ಬಳಿ ರೆಮ್ಡೆಸಿವಿರ್ ಇಲ್ಲದ್ದರಿಂದ ಎರಡು ಡೋಸ್ ಅನ್ನು ಖರೀದಿಸಿ ತರುವಂತೆ ನಮಗೆ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು. ಆದರೆ, ಈ ಔಷಧ ಕಾಳಸಂತೆಯಲ್ಲಿ ಲಭ್ಯವಿದೆಯಾದರೂ, ಬೆಲೆ ಗಗನಕ್ಕೇರಿದೆ ಎಂದು ಹೆಸರು ಹೇಳಲಿಚ್ಛಿಸದ ಕೋವಿಡ್ ರೋಗಿಯ ಸಂಬಂಧಿಯೊಬ್ಬರು ಈಟಿವಿ ಭಾರತ್ಗೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಎಂಬುದಾಗಿ ನಿಯೋಜಿಸಿದ ದೆಹಲಿಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಕೋವಿಡ್ ಸೋಂಕಿತ ಸಂಬಂಧಿಯೊಬ್ಬರಿಗೆ ಚಿಕಿತ್ಸೆಗೆ ದಾಖಲಿಸಿದ್ದ ದೆಹಲಿ ಮೂಲದ ಉದ್ಯಮಿಯ ಆಘಾತಕಾರಿ ಅನುಭವವು, ಕೋವಿಡ್ಗೆ ಜನಸಾಮಾನ್ಯರು ಚಿಕಿತ್ಸೆ ಪಡೆಯಲು ಪರದಾಡುತ್ತಿರುವುದನ್ನು ಅನಾವರಣಗೊಳಿಸಿದೆ. ಅಷ್ಟೇ ಅಲ್ಲ, ಇದು ಅಧಿಕಾರಿಗಳ ಕಣ್ಣು ತೆರೆಸುವಂತಿದೆ.
ಈ ಸೋಂಕು ಭಾರತದಾದ್ಯಂತ 26,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ ಮತ್ತು 11.48 ಲಕ್ಷ ಜನರಿಗೆ ಸೋಂಕು ತಗುಲಿದೆ. ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ 5,47,000 ಕ್ಕೂ ಹೆಚ್ಚು ಸಾವು ಸಂಭವಿಸಿದೆ ಮತ್ತು 12 ಮಿಲಿಯನ್ ಜನರಿಗೆ ಸೋಂಕು ತಗುಲಿದೆ.
ಕೋವಿಡ್ 19 ಸೋಂಕಿನ ಚಿಕಿತ್ಸೆಯಲ್ಲಿ ತುರ್ತು ಸ್ಥಿತಿಗಾಗಿ ಬಳಕೆ ಮಾಡುವುದಕ್ಕಾಗಿ ಕೆಲವು ಔಷಧಗಳನ್ನು ಕಳೆದ ತಿಂಗಳು ಕೇಂದ್ರ ಸರ್ಕಾರ ಅನುಮೋದಿಸಿದೆ. ಗಿಲೀಡ್ ಸೈನ್ಸಸ್ನಿಂದ ರೆಮ್ಡೆಸಿವಿರ್ ಅನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಸಿಪ್ಲಾ, ಹೀಟೆರೊ ಮತ್ತು ಮೈಲಾನ್ ಅನುಮತಿ ಪಡೆದಿದೆ. ಫಾಬಿಫ್ಲು ಬ್ರಾಂಡ್ ನೇಮ್ ಹೆಸರಿನಲ್ಲಿ ಫಾವಿಪಿರಾವಿರ್ ಅನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಗ್ಲೆನ್ಮಾರ್ಕ್ ಅನುಮತಿ ಪಡೆದಿದೆ.
ಕೋವಿಡ್ 19 ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಎಂದು ರೆಮ್ಡೆಸಿವಿರ್ ಅನ್ನು ಪರಿಗಣಿಸಲಾಗಿದ್ದು, ಇದಕ್ಕೆ ದೇಶದಲ್ಲಿ ಅನುಮತಿ ನೀಡಿರುವುದು ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ನಿರಾಳವಾಗಿದೆ. ಆದರೆ, ಇದಕ್ಕೆ ಅನುಮತಿ ನೀಡಿರುವುದು ಹಣ ದಾಹಕ್ಕೆ ಬಿದ್ದವರಿಗೆ ಒಳ್ಳೆಯ ಅವಕಾಶ ನೀಡಿದಂತಾಗಿದೆ.
“ತಿಂಗಳ ಆರಂಭದಲ್ಲಿ, ನಮ್ಮ ರೋಗಿ ಅಡ್ಮಿಟ್ ಆಗಿರುವ ಆಸ್ಪತ್ರೆಯ ವೈದ್ಯರು ನಮಗೆ ಕರೆ ಮಾಡಿ, ರೋಗಿಗೆ ರೆಮ್ಡೆಸಿವಿರ್ ಅನ್ನು ನೀಡಬೇಕಿದೆ ಎಂದರು. ಅಷ್ಟಕ್ಕೂ, ಅವರು ಹೇಳಿದ ಪ್ರಕಾರ ಈಗಾಗಲೇ ರೋಗಿಗೆ ಈ ಔಷಧ ನೀಡಲಾಗಿದೆ. ಆದರೆ ಔಷಧ ಪೂರೈಕೆ ಇಲ್ಲದ್ದರಿಂದ ಈಗ ಅವರಿಗೆ ಎರಡು ಡೋಸ್ ಔಷಧ ಬೇಕಾಗಿದೆ. ಅದರ ವ್ಯವಸ್ಥೆ ಮಾಡಿಕೊಡಿ ಎಂದು ಅವರು ನಮಗೆ ಹೇಳಿದರು” ಎಂದು ಈಟಿವಿ ಭಾರತ್ಗೆ ರೋಗಿಯ ಸಂಬಂಧಿ ಹೇಳಿದ್ದಾರೆ.
ಆಸ್ಪತ್ರೆಯಿಂದ ಕರೆ ಬಂದ ನಂತರ, ಔಷಧವನ್ನು ಹುಡುಕಲು ಅವರು ಆರಂಭಿಸಿದೆವು. ದೆಹಲಿಯಲ್ಲಿರುವ ಎರಡು ಅಧಿಕೃತ ಡೀಲರ್ಗಳನ್ನು ಸಂಪರ್ಕಿಸಿದೆವು. ರೋಗಿಯ ಆಧಾರ್ ಕಾರ್ಡ್, ವೈದ್ಯರ ಶಿಫಾರಸು ಮತ್ತು ಕೋವಿಡ್ ಪಾಸಿಟಿವ್ ವರದಿಯನ್ನು ಸಲ್ಲಿಸಬೇಕು. ಅಗ, ಪ್ರತಿ ಸೀಸೆಗೆ ರೂ. 4,500 ದರದಲ್ಲಿ ರೆಮ್ಡೆಸಿವಿರ್ ಔಷಧ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
“ದುರಾದೃಷ್ಟವಶಾತ್, ಎರಡೂ ಕಡೆಯಲ್ಲಿ ಔಷಧ ಸಂಗ್ರಹ ಇರಲಿಲ್ಲ” ಎಂದು ಸಂಬಂಧಿಗೆ ಔಷಧವನ್ನು ಖರೀದಿಸುವುದಕ್ಕಾಗಿ ಪಟ್ಟ ಪಡಿಪಾಟಲನ್ನು ಅವರು ವಿವರಿಸಿದ್ದಾರೆ.
ಇದು ಜೀವನ್ಮರಣದ ಪ್ರಶ್ನೆ. ಹೀಗಾಗಿ ನಾವು ಹುಡುಕಾಟ ಮುಂದುವರಿಸಿದೆವು ಮತ್ತು ಇತರ ಔಷಧ ಮಾರಾಟಗಾರರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದೆವು. ಈ ಬಗ್ಗೆ ಹಲವೆಡೆ ಮಾಹಿತಿ ಹರಡಿದ ನಂತರ ಕೆಲವರು, ಕಾಳಸಂತೆಯಲ್ಲಿ ಇದು ಮಾರಾಟವಾಗುತ್ತಿದೆ” ಎಂದು ನಮಗೆ ಹೇಳಿದರು.
ಒಂದು ಸೀಸೆಗೆ ರೂ. 15,000 ಬೆಲೆ ಇದೆ ಎಂದು ನಮಗೆ ಯಾರೋ ಹೇಳಿದರು. ಆದರೆ ನಾವು ಖರೀದಿ ಮಾಡುವ ದಿನ ಹೋಗಿ ಕೇಳಿದರೆ ಒಂದು ಸೀಸೆಗೆ ರೂ. 35,000 ಎಂದು ಹೇಳಿದರು. ಅದಕ್ಕೂ ಮೊದಲ ದಿನ ಇದರ ಬೆಲೆ 27 ಸಾವಿರ ರೂ. ಆಗಿತ್ತು. ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಔಷಧದ ಬೆಲೆ ಚಿನ್ನದ ದರದ ರೀತಿ ಏರಿಕೆಯಾಗುತ್ತಿದೆ” ಎಂದು ಈಟಿವಿ ಭಾರತ್ಗೆ ರೋಗಿಯ ಸಂಬಂಧಿ ಹೇಳಿದ್ದಾರೆ.
ರೋಗಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಯ ಹೆಸರು ಹೇಳಲು ಸಂಬಂಧಿ ನಿರಾಕರಿಸಿದ್ದು, ತನ್ನ ಗುರುತನ್ನು ಬಹಿರಂಗಗೊಳಿಸದೆಯೇ ವಿವರವನ್ನು ಹಂಚಿಕೊಳ್ಳುವ ಅವಕಾಶ ಲೋಕಲ್ ಸರ್ಕಲ್ ಎಂಬ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ನಲ್ಲಿ ಇರುವುದರಿಂದ ಅಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ವಿಶೇಷವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಜೀವ ರಕ್ಷಕ ಔಷಧದ ಕಳ್ಳ ವ್ಯಾಪಾರ ನಡೆಯುತ್ತಿರುವುದರಿಂದ ಈ ಬಗ್ಗೆ ಜನರ ಗಮನ ಸೆಳೆಯಲು ತಾನು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ದೆಹಲಿ, ಪೂರ್ವ ದೆಹಲಿ ಮತ್ತು ಗುರುಗ್ರಾಮದಲ್ಲಿ ನಾವು ಪರಿಶೀಲಿಸಿದೆವು. ಎಲ್ಲ ಮೂರು ಕಡೆಯೂ ಈ ಔಷಧ ಕಾಳಸಂತೆಯಲ್ಲಿ ಲಭ್ಯವಿತ್ತು. ಆದರೆ ದೆಹಲಿಯಲ್ಲಿನ ಅಧಿಕೃತ ವ್ಯಾಪಾರಿಗಳ ಬಳಿ ಇರಲಿಲ್ಲ. ಇದು ಕಾಳಸಂತೆ ಎಂಬುದು ನನಗೆ ಸಾಬೀತಾಗಿದೆ” ಎಂದು ಅವರು ಹೇಳಿದರು.
“ಎರಡು ಗಂಟೆ ಮೊದಲೇ ಹೇಳಿದರೆ ನಾವು ಔಷಧವನ್ನು ತಂದು ಕೊಡುತ್ತೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.” ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬುದು ಇದರಲ್ಲೇ ಸ್ಪಷ್ಟವಾಗುತ್ತದೆ ಎಂದು ಅವರು ಒತ್ತಿ ಹೇಳುತ್ತಾರೆ.
ಎಂಆರ್ಪಿಯಲ್ಲಿ ಬಿಲ್ ನೀಡಲು ಕಾಳಸಂತೆಕೋರರು ಸಿದ್ಧವಿದ್ದರು. ಮೊದಲು ಅವರು ಬಿಲ್ ಕೊಡಲು ನಿರಾಕರಿಸಿದರಾದರೂ, ಎಂಆರ್ಪಿಯಲ್ಲಿ ಬಿಲ್ ನೀಡಲು ಒಪ್ಪಿದರು. ಇದರಿಂದ ಔಷಧ ಅಧಿಕೃತ ಎಂಬುದನ್ನು ನಾವು ಪರಿಶೀಲಿಸಿಕೊಳ್ಳಬಹುದಾಗಿತ್ತು.
“ನನಗೆ ಇನ್ವಾಯ್ಸ್ ಕೊಡುವುದಿಲ್ಲ ಎಂದು ವ್ಯಾಪಾರಿ ಹೇಳಿದಾಗ, ಔಷಧ ಅಸಲಿ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? ನನಗೆ ಸೀಸೆಯಲ್ಲಿ ನೀರು ಹಾಕಿಕೊಟ್ಟರೆ ಏನು ಮಾಡಲಿ? ಎಂದು ಕೇಳಿದೆ. ಎಂಆರ್ಪಿ ಪ್ರಕಾರ ನನಗೆ ಬಿಲ್ ಕೊಡಬೇಕು. ಬಿಲ್ನಲ್ಲಿರುವ ಔಷಧದ ಬ್ಯಾಚ್ ನಂಬರ್ಗೂ ಔಷಧಕ್ಕೂ ಹೋಲಿಕೆಯಾಗಬೇಕು. ಇದರಿಂದ ನಾನು ಔಷಧ ಅಸಲಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದೆ. ಅದಕ್ಕೆ ಅವರು ಒಪ್ಪಿದರು” ಎಂದು ದೆಹಲಿಯಲ್ಲಿ ಉದ್ಯಮಿಯಾಗಿರುವ ರೋಗಿಯ ಸಿಬ್ಬಂದಿ ಹೇಳಿದ್ದಾರೆ.
ಈ ಕಾಳಸಂತೆಯನ್ನು ಅಧಿಕಾರಿಗಳು ನಿಯಂತ್ರಿಸಬೇಕು:
ಜೀವ ಉಳಿಸುವುದೇ ಆದ್ಯತೆಯಾಗಿರುವುದರಿಂದ ಇಂತಹ ಸಮಯದಲ್ಲಿ ಹೆಚ್ಚುವರಿ ಹಣ ಪಾವತಿ ಮಾಡಿ ಔಷಧ ಖರೀದಿ ಮಾಡುವ ಬಗ್ಗೆ ಯಾರೂ ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಜನಸಾಮಾನ್ಯರು ಇಷ್ಟು ವೆಚ್ಚದ ಔಷಧ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ವಿಷಯವನ್ನು ನಾನು ಎಲ್ಲರ ಗಮನಕ್ಕೆ ತರಲು ನಿರ್ಧರಿಸಿದೆ ಎಂದು ದೆಹಲಿ ಮೂಲದ ಉದ್ಯಮಿ ಹೇಳಿದ್ದಾರೆ.
“ನನಗೆ ಇದು ಆಘಾತವೇ ಆಗಿದ್ದರೂ, ದೇವರ ದಯೆಯಿಂದ ನಾನು ಔಷಧ ಖರೀದಿಸಲು ಸರ್ಮಥನಾಗಿದ್ದೆ. ಆದರೆ, ನನ್ನ ಅಂತಃಕರಣ ಸುಮ್ಮನಿರಲಿಲ್ಲ. ಅಂದು ನಾನು ಕಚೇರಿಯಲ್ಲಿದ್ದೆ. ನನ್ನ ದೇಶದಲ್ಲಿ ಹೀಗಾಗುತ್ತಿದೆಯಲ್ಲ ಎಂದು ನನಗೆ ದುಃಖವಾಯಿತು. ಇದು ನಿಜಕ್ಕೂ ಬೇಸರದ ಸಂಗತಿ” ಎಂದು ಅವರು ಹೇಳಿಕೊಂಡಿದ್ದಾರೆ.
ಹೀಟೆರೋ ಕಂಪನಿಯ ಅಧಿಕೃತ ಡಿಎಸ್ಎಯಿಂದ ಔಷಧ ಖರೀದಿ ಮಾಡಿ, ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಯಿತು ಎಂದು ಅವರು ಈಟಿವಿಗೆ ದೃಢೀಕರಿಸಿದ್ದಾರೆ. ಸದ್ಯ ಕಾಳಸಂತೆಯಲ್ಲಿ ಔಷಧ ಮಾರಾಟವನ್ನು ನಿಯಂತ್ರಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದ ಲೋಕಲ್ ಸರ್ಕಲ್ ಸಂಸ್ಥಾಪಕ ಸಚಿನ್ ಟಪಾರಿಯಾ, ಇಂತಹ ಜೀವ ರಕ್ಷಕ ಔಷಧಗಳ ಬೆಲೆಯನ್ನು ನಿಯಂತ್ರಿಸಲು ದೇಶದಲ್ಲಿ ಯಾವುದೇ ಪರಿಣಾಮಕಾರಿ ತಾಂತ್ರಿಕತೆ ಲಭ್ಯವಿಲ್ಲ ಎಂದು ಈಟಿವಿ ಭಾರತ್ಗೆ ತಿಳಿಸಿದ್ದಾರೆ. “ಇದೇ ಪರಿಸ್ಥಿತಿ ದೆಹಲಿಯ ದೊಡ್ಡ ಆಸ್ಪತ್ರೆಯಲ್ಲೂ ಇದೆ. ಇಡೀ ದೇಶದಲ್ಲಿ ಇದು ನಡೆಯುತ್ತಿದೆ. ನಮ್ಮ ಬಳಿ ಇಷ್ಟೇ ರೆಮ್ಡೆಸಿವಿರ್ ಡೋಸ್ಗಳು ಇವೆ. ಉಳಿದವನ್ನು ನೀವು ಬೇರೆ ಕಡೆಯಿಂದ ತಂದುಕೊಡಬೇಕಾಗುತ್ತದೆ ಎಂದು ಹೇಳುತ್ತವೆ” ಎಂದು ಸಚಿನ್ ಟಪಾರಿಯಾ ಹೇಳಿದ್ದಾರೆ.
“ನೀವು ಔಷಧ ಅಂಗಡಿಗಳಿಗೆ ಭೇಟಿ ನೀಡಿದಾಗ, ಕಾಳಸಂತೆಯಲ್ಲಿ ಇದರ ಬೆಲೆ 15 ಸಾವಿರದಿಂದ 60 ಸಾವಿರ ರೂ.ವರೆಗೆ ಇದೆ ಎಂದು ಹೇಳುತ್ತಾರೆ. ಎರಡು ಗಂಟೆಯಲ್ಲಿ ವ್ಯವಸ್ಥೆ ಮಾಡುವಂತೆ ನಿಮಗೆ ಸೂಚಿಸುತ್ತಾರೆ. ನೀವು ಅಧಿಕೃತ ಡೀಲರ್ಗಳ ಬಳಿ ಹೋದರೆ ಅಲ್ಲಿ ಲಭ್ಯವಿರುವುದಿಲ್ಲ. ಬಹುಶಃ ವ್ಯಾಪಾರಿಗಳು ಹಿಂದಿನ ಬಾಗಿಲಿನಲ್ಲಿ ಈ ಕಾಳಸಂತೆಕೋರರಿಗೆ ಔಷಧವನ್ನು ಮಾರಾಟ ಮಾಡಿರುತ್ತಾರೆ.” ಎಂದು ಅವರು ಹೇಳಿದ್ದಾರೆ.
ಲೋಕಲ್ ಸರ್ಕಲ್ನಲ್ಲಿ ಈ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ವಿ.ಜಿ ಸೊಮಾನಿ, ರೆಮ್ಡೆಸಿವಿರ್ಕಾಳಸಂತೆ ವಹಿವಾಟನ್ನು ನಿಯಂತ್ರಿಸುವಂತೆ ಸೂಚಿಸಿದ್ದಾರೆ.
“ಗೃಹ ಸಚಿವಾಲಯದ ಮೂಲಕ ಲೋಕಲ್ ಸರ್ಕಲ್ನಿಂದ ನಮಗೆ ಈ ಕುರಿತ ದೂರು ಕೇಳಿಬಂದಿದ್ದು, ಕೆಲವು ದುಷ್ಟಶಕ್ತಿಗಳು ರೆಮ್ಡೆಸಿವಿರ್ ಅನ್ನು ಕಾಳಸಂತೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ” ಎಂದು ರಾಜ್ಯದ ಅಧಿಕಾರಿಗಳಿಗೆ ಸೋಮವಾರ ವಿ.ಜಿ.ಸೊಮಾನಿ ಪತ್ರ ಬರೆದು ತಿಳಿಸಿದ್ದಾರೆ.
“ಈ ಹಿನ್ನೆಲೆಯಲ್ಲಿ, ಕಾಳಸಂತೆ ಮತ್ತು ಎಂಆರ್ಪಿಗಿಂತ ಹೆಚ್ಚು ಬೆಲೆಗೆ ರೆಮ್ಡೆಸಿವರ್ ಚುಚ್ಚುಮದ್ದನ್ನು ಮಾರಾಟ ಮಾಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.