ಹೊಸದಿಲ್ಲಿ: ಕೋವಿಡ್-19 ಸೋಂಕು ತಗುಲಿದಾಗ ಉಸಿರಾಟದ ಸಮಸ್ಯೆ ತೀವ್ರವಾಗುವುದರ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳೂ ಹೆಚ್ಚಾಗುತ್ತವೆ ಎಂದು ಇತ್ತೀಚಿನ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.
ಕೋವಿಡ್-19 ಸೋಂಕು ತಗುಲಿದಾಗ ಆರೋಗ್ಯ ಸ್ಥಿತಿ ಗಂಭೀರವಾದ ಶೇ. 20ರಷ್ಟು ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಇವರು ಸಾಮಾನ್ಯವಾಗಿ ನ್ಯೂಮೋನಿಯಾ ಹಾಗೂ ಇತರ ಉಸಿರಾಟದ ತೊಂದರೆಯಿಂದ ಬಳಲುವಂಥವರಾಗಿರುತ್ತಾರೆ. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಆಸ್ಪತ್ರೆಗೆ ದಾಖಲಾದ ಶೇ. 10ರಿಂದ 15ರಷ್ಟು ಕೋವಿಡ್ ರೋಗಿಗಳು ಹೃದಯ ರಕ್ತನಾಳದ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬಂದಿದೆ.
ಮೊದಲೇ ಹೃದಯ ಬೇನೆ ಇರುವವವರಿಗೆ ಕೋವಿಡ್-19 ಸೋಂಕು ತಗುಲಿದಾಗ ಅಂಥವರು ಹೃದಯಾಘಾತ ಅಥವಾ ರಕ್ತ ಹೆಪ್ಪುಗಟ್ಟಿ ಹೃದಯ ಸ್ತಂಭನವಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿವೆ ಎನ್ನಲಾಗಿದೆ. ನ್ಯೂಮೋನಿಯಾ ಕಾರಣದಿಂದ ಆಮ್ಲಜನಕದ ಕೊರತೆ ಇರುವಾಗ ಹೃದಯದ ಮೇಲೆ ಅತಿಯಾದ ಒತ್ತಡ ಬೀಳುವುದರಿಂದ ಹೀಗಾಗುತ್ತದೆ ಎನ್ನುತ್ತಾರೆ ತಜ್ಞರು.
ಕೋವಿಡ್-19ನಿಂದ ರೋಗಿಗಳು ಮತ್ತೊಂದು ಹೃದಯ ಸಂಬಂಧಿ ಸಮಸ್ಯೆ ಮಯೋಕಾರ್ಡಿಟಿಸ್ನಿಂದ (ಹೃದಯ ಸ್ನಾಯುಗಳ ಉರಿಯೂತ) ಬಳಲುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಕೋವಿಡ್ ಸೋಂಕಿತರ ಹೃದಯದ ಸ್ನಾಯುಗಳು ದುರ್ಬಲವಾಗುವುದು ಕಂಡು ಬಂದಿದ್ದರೂ, ಇದು ಕೋವಿಡ್ನಿಂದಲೇ ಸಂಭವಿಸುತ್ತಿದೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ವರದಿಗಳ ಪ್ರಕಾರ ಮೊದಲೇ ಹೃದಯ ಬೇನೆ ಸಮಸ್ಯೆ ಇರುವ ಶೇ. 10ರಷ್ಟು ಕೋವಿಡ್ ಸೋಂಕಿತರು ಮರಣವನ್ನಪ್ಪುವ ಸಂಭವ ಜಾಸ್ತಿ. ಇದಕ್ಕೆ ಹೋಲಿಸಿದರೆ ಆರೋಗ್ಯವಂತರಾಗಿರುವವರ ಮರಣ ಪ್ರಮಾಣ ಶೇ. 1ರಷ್ಟು ಮಾತ್ರ ಎನ್ನಲಾಗಿದೆ. ಹೀಗಾಗಿ ಹೃದಯದ ಬೇನೆ ಇರುವವರು ಕೋವಿಡ್ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದು ಅತಿ ಅಗತ್ಯ ಎಂದು ಹೇಳಲಾಗಿದೆ.