ನವದೆಹಲಿ: ಸಚಿನ್ ಪೈಲಟ್ ನೇತೃತ್ವದ 19 ಕಾಂಗ್ರೆಸ್ ಶಾಸಕರ ಅನರ್ಹತೆ ಕುರಿತು ನೀಡಿರುವ ನೋಟಿಸ್ಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರು ಸಲ್ಲಿಸಿರುವ ಎಸ್ಎಲ್ಪಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅನರ್ಹ ಡಿಸಿಎಂ ಸಚಿನ್ ಪೈಲಟ್ ನಡುವಿನ ರಾಜಕೀಯ ಹೋರಾಟದಲ್ಲಿ ನಿರ್ಣಾಯಕ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ.
ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ನೀಡಿದ ದೂರುಗಳ ಮೇಲೆ ಸ್ಪೀಕರ್ ಸಿಪಿ ಜೋಶಿ ಅವರು ನೀಡಿದ ನೋಟಿಸ್ ಪ್ರಶ್ನಿಸಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಚಾರಣೆಯನ್ನು ತಡೆಹಿಡಿದು ಕೋರ್ಟ್ ಆದೇಶ ನೀಡಿತ್ತು. ಈ ಬಳಿಕ ಸ್ಪೀಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್‌ನ ಯಥಾಸ್ಥಿತಿ ಆದೇಶವನ್ನ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ.
ಇನ್ನು ಈ ಸಂಬಂಧ ಈಗಾಗಲೇ ಹೇಳಿಕೆ ನೀಡಿರುವ ಸಿಪಿ ಜೋಶಿ, "ಸಂವಿಧಾನ ಪೀಠದ ಪ್ರಕಾರ, ನ್ಯಾಯಾಂಗವು ಸ್ಪೀಕರ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಶಾಸಕರಿಗೆ ಕಾನೂನು ಬದ್ಧವಾಗಿ ನೋಟಿಸ್ ನೀಡಿದ್ದೇನೆ. ಈ ವಿಷಯದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳು ನ್ಯಾಯಾಂಗದ ಮೂಲಕ ತಪ್ಪಿಸಿಕೊಳ್ಳುತ್ತಿರುವುದು ದುರದೃಷ್ಟಕರ" ಎಂದು ತಿಳಿಸಿದ್ದಾರೆ.