ತೆಲಂಗಾಣ: ನಾಲ್ಕು ವರ್ಷದ ಪುಟ್ಟ ಮಗಳನ್ನು ತನ್ನೊಂದಿಗೆ ವೈನ್ ಷಾಪ್ಗೆ ಕರೆದೊಯ್ದ ತಂದೆಯೊಬ್ಬ ಮದ್ಯ ಖರೀದಿ ಬಳಿಕ ಮಗಳನ್ನೇ ಮರೆತು ಬಂದ ಘಟನೆ ತೆಲಂಗಾಣದ ಭದ್ರಾಡ್ರಿ ಕೊತ್ತಗುಡೆಂ ಜಿಲ್ಲೆ ಅಶ್ವರಪೇಠ ಎಂಬಲ್ಲಿ ನಡೆದಿದೆ.
ಇಲ್ಲಿನ ಊಟ್ಲಪಲ್ಲಿ ಮೂಲದ ರಾಮಕೃಷ್ಣ ಎಂಬಾತ ತನ್ನ ಅತ್ತೆಯ ಮನೆಯಲ್ಲೇ ಉಳಿದುಕೊಂಡಿದ್ದ. ಈತ ತನ್ನ ಸ್ವಂತ ಊರಿಗೆ ಹೋಗಿ ಬರುವುದಾಗಿ ಹೇಳಿ 4 ವರ್ಷದ ಮಗಳನ್ನು ಜೊತೆಗೆ ಕರೆದೊಯ್ದಿದ್ದಾನೆ. ತನ್ನ ಊರಿಗೆ ಸೇರಿಕೊಂಡ ಬಳಿಕ ಆತ ನೇರವಾಗಿ ವೈನ್ ಷಾಪ್ಗೆ ಹೋಗಿದ್ದಾನೆ. ವೈನ್‌ಶಾಪ್‌ನಲ್ಲಿ ಮದ್ಯ ಖರೀದಿ ಬಳಿಕ ಆತ ತನ್ನೊಂದಿಗೆ ಮಗಳು ಬಂದಿರುವುದನ್ನೇ ಮರೆತಿದ್ದಾನೆ.
ಮಗು ಅಳುತ್ತಾ ಗಲ್ಲಿಗಳಲ್ಲಿ ಓಡಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ವಿಚಾರಿಸಿ ಬಾಲಕಿಯ ತಾಯಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಠಾಣೆಗೆ ಬಂದ ತಂದೆ ತಾಯಿಗೆ ಕೌನ್ಸೆಲಿಂಗ್ ಮಾಡಿ ಮಗುವನ್ನು ಒಪ್ಪಿಸಿದರು.