ಪಾಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ 'ಜಂಗಲ್ ರಾಜ್ ಕಾ ಯುವರಾಜ' ಹೇಳಿಕೆಗೆ ತಿರುಗೇಟು ನೀಡಿರುವ ಆರ್ಜೆಡಿ ನಾಯಕ ತೇಜಶ್ವಿ ಯಾದವ್, ವೈಯಕ್ತಿಕ ದಾಳಿ ಬದಲು ಬಿಹಾರದಲ್ಲಿನ ಹಸಿವು ಮತ್ತು ನಿರುದ್ಯೋಗ ವಿಷಯಗಳ ಬಗ್ಗೆ ಮಾತನಾಡಬೇಕಾಗಿತ್ತು ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರಕ್ಕೆ ತೆರಳುವ ಮೊದಲು ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ಪಿಎಂ ಮೋದಿ ನಿಮ್ಮನ್ನು 'ಜಂಗಲ್ ರಾಜ್ ಕಾ ಯುವರಾಜ್' ಎಂದು ಕರೆಯುತ್ತಾರೆ ಎಂದು ಕೇಳಿದ್ದಕ್ಕೆ, "ಅವರು ದೇಶದ ಪ್ರಧಾನಿ, ಅವರು ಏನು ಬೇಕಾದರೂ ಹೇಳಬಹುದು. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ಅವರು ಬಿಹಾರಕ್ಕೆ ಬಂದಾಗ ವಿಶೇಷ ಪ್ಯಾಕೇಜ್, ನಿರುದ್ಯೋಗ ಸೇರಿದಂತೆ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು" ಎಂದಿದ್ದಾರೆ.
"ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಅವರು 30 ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ. ಅವರ ಪ್ರಧಾನಿ ಈ ರೀತಿ ಮಾತನಾಡಿದರೇನು, ಸಾರ್ವಜನಿಕರಿಗೆ ಎಲ್ಲವೂ ತಿಳಿದಿದೆ. ಆದರೆ ಪ್ರಧಾನಿಯವರು ಬಡತನ, ಕಾರ್ಖಾನೆಗಳು, ರೈತರು, ನಿರುದ್ಯೋಗ ಮುಂತಾದ ವಿಷಯಗಳ ಬಗ್ಗೆ ಮಾತನಾಡಬೇಕು" ಎಂದು ಆರ್ಜೆಡಿ ನಾಯಕ ಹೇಳಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರನ್ನು "ಜಂಗಲ್ ರಾಜ್ಯದ ಯುವರಾಜ" ಎಂದು ಕರೆದಿದ್ದರು.