ನವದೆಹಲಿ : ಆ್ಯಂಟಿಸೆಪ್ಟಿಕ್ ಉತ್ತನ್ನಗಳಲ್ಲಿ ಪ್ರಸಿದ್ದಿ ಹೊಂದಿರುವ 'ಡೆಟಾಲ್' ಬ್ರ್ಯಾಂಡ್ನ ಲೋಗೋ ಮತ್ತು ಟ್ರೇಡ್ ಮಾರ್ಕ್ನ್ನೇ ಹೋಲುವ 'ಡೆವ್ಟಾಲ್' ಎಂಬ ಹೆಸರಿನ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಿ ಮಾರಾಟ ಮಾಡಿದ್ದಕ್ಕಾಗಿ ಸಂಸ್ಥೆಯೊಂದಕ್ಕೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ.
ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಡೆಟಾಲ್ ಉತ್ಪನ್ನಗಳ ಲೋಗೋ ಹಾಗೂ ಟ್ರೇಡ್ ಮಾರ್ಕ್ ಹೋಲುವ ಡೆವ್ಟಾಲ್ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿ ಮಾರಾಟ ಮಾಡಿತ್ತು. ಇದರ ವಿರುದ್ಧ ಡೆಟಾಲ್ ತಯಾರಿಕ ಸಂಸ್ಥೆ ರೆಕ್ಕಿಟ್ ಬೆನ್ಕಿಸರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು, ಅಲ್ಲದೇ ತಮ್ಮ ಉತ್ಪನ್ನದ ಲೋಗೋ ಹಾಗೂ ಟ್ರೇಡ್ ಮಾರ್ಕ್ ನಕಲು ಮಾಡಿದ್ದಕ್ಕಾಗಿ ಸೂಕ್ತ ಪರಿಹಾರ ನೀಡುವಂತೆ ಕೋರಿತ್ತು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದರ್, ಈಗಾಗಲೇ ಮಾರುಕಟ್ಟೆಯಲ್ಲಿರುವ ಡೆವ್ಟಾಲ್ ಉತ್ಪನ್ನಗಳನ್ನು ಹಿಂಪಡೆಯಬೇಕು ಮತ್ತು ಒಂದು ವಾರದೊಳಗೆ 1 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ.
ವಿಚಾರಣೆ ವೇಳೆ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಹಿಂಪಡೆಯುವುದಾಗಿ ತಿಳಿಸಿದೆ. ಅಲ್ಲದೆ, ನಮ್ಮ ಉತ್ಪನ್ನಗಳು ಕೋವಿಡ್ ನಿಯಂತ್ರಿಸಲು ಉಪಕಾರಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಡೆಟಾಲ್ ತಯಾರಕ ರೆಕ್ಕಿಟ್ ಬೆನ್ಕಿಸರ್ ಪರ ಹಿರಿಯ ವಕೀಲ ಚಂದರ್ ಲಾಲ್ ಮತ್ತು ವಕೀಲ ನ್ಯಾನ್ಸಿ ರಾಯ್ ವಾದಿಸಿದರು. ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಪರ ವಕೀಲ ಉಮೇಶ್ ಮಿಶ್ರಾ ವಾದಮಂಡನೆ ಮಾಡಿದ್ದರು.