ಮುಂಬೈ (ಮಹಾರಾಷ್ಟ್ರ): ಅವಿವಾಹಿತ ಮಹಿಳೆಯೊಬ್ಬರಿಗೆ 23 ವಾರಗಳ ಗರ್ಭ ತೆಗೆಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಮೆಡಿಕಲ್ ಪ್ರಗ್ನೆನ್ಸಿ ಆಕ್ಟ್ ಪ್ರಕಾರ 20 ವಾರ ಮೀರಿದ ಗರ್ಭವನ್ನು ತೆಗೆಸುವಂತಿಲ್ಲ. ಆದರೆ ಮಹಿಳೆ ಮದುವೆ ಆಗದೆ ಮಗುವಿಗೆ ಜನ್ಮ ನೀಡಿದರೆ ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಎಸ್.ಜೆ.ಕಥವಾಲ್ಲಾ ಮತ್ತು ಸುರೇಂದ್ರ ತವಾಡೆ ಅವರಿದ್ದ ನ್ಯಾಯಪೀಠ, ಲಾಕ್ಡೌನ್ ಹಿನ್ನೆಲೆ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ನಿವಾಸಿ 23 ವರ್ಷದ ಮಹಿಳೆ 20 ವಾರಗಳ ಅನುಮತಿ ಮಿತಿಯೊಳಗೆ ವೈದ್ಯರನ್ನು ಸಂಪರ್ಕಿಸಿ ಗರ್ಭಪಾತ ಮಾಡಿಸುವಲ್ಲಿ ವಿಫಲವಾಗಿದ್ದಾಳೆ. ಹಾಗಾಗಿ ತಾನು ಬಯಸಿದಂತೆ ಗರ್ಭಪಾತದ ಪ್ರಕ್ರಿಯೆಗೆ ಒಳಗಾಗುವಂತೆ ನ್ಯಾಯಪೀಠ ಅನುಮತಿ ನೀಡಿದೆ.
ತಾನು ಅವಿವಾಹಿತೆಯಾಗಿದ್ದು, ಮಗುವನ್ನು ನಿಭಾಯಿಸಲು ಸಾಧ್ಯವಿಲ್ಲ. ಅಲ್ಲದೆ ಸಮಾಜಿಕ ಕಳಂಕಕ್ಕೀಡಾಗಿ ಜೀವನ ನಡೆಸುವುದು ಅಸಾಧ್ಯ. ಗರ್ಭಾವಸ್ಥೆಯನ್ನು ಮಂದುವರೆಸುವುದರಿಂದ ತಾನು ಇನ್ನೂ ಮಾನಸಿಕ ಖಿನ್ನತೆಗೆ ಒಳಗಾಗುತ್ತೇನೆ. ಇನ್ನು ತಾಯಿಯಾಗಲು ತಾನು ಮಾನಸಿಕವಾಗಿಯೂ ಸಿದ್ಧವಾಗಿಲ್ಲ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.
ಮೇ 29ರಂದು ಮಹಿಳೆಯ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ, ಗರ್ಭಪಾತ ಮಾಡಿಸಿದರೆ ಮಹಿಳೆಗೆ ಆಗುವ ಅಪಾಯಗಳ ಬಗ್ಗೆ ಪರೀಕ್ಷಿಸುವಂತೆ ರತ್ನಾಗಿರಿಯ ಸಿವಿಲ್ ಆಸ್ಪತ್ರೆ ವೈದ್ಯಕೀಯ ಮಂಡಳಿಗೆ ನಿರ್ದೇಶನ ನೀಡಿತ್ತು.
ಕಳೆದ ವಾರ ಸಲ್ಲಿಸಿದ ಮನವಿಯ ಪ್ರಕಾರ ಮಹಿಳೆ 23 ವಾರಗಳ ಗರ್ಭಿಣಿಯಾಗಿದ್ದಾಳೆ. ಈಕೆಗೆ ಶುಕ್ರವಾರದೊಳಗೆ ತನ್ನ ಆಯ್ಕೆಯ ವೈದ್ಯಕೀಯ ಸೌಲಭ್ಯದಲ್ಲಿ ಈ ಪ್ರಕ್ರಿಯೆಗೆ ಒಳಗಾಗಲು ನ್ಯಾಯಪೀಠ ಅನುಮತಿ ನೀಡಿದೆ.