ನವದೆಹಲಿ: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ರಸ್ತೆಗಳು ಮತ್ತು ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾರೆ. ಇಂತವರಿಗೆ ರಾಜ್ಯ ಸರ್ಕಾರಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ಅವರುಗಳನ್ನು ಸುರಕ್ಷಿತವಾಗಿ ಕಳಿಸಿಕೊಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.
ಸಂಸತ್ ಕಾರ್ಯದರ್ಶಿ ರಾಜೀವ್ ಗೌಬಾ ಭಾನುವಾರ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಗಮನಹರಿಸುಂತೆ ಸೂಚಿಸಿದ್ದಾರೆ.
ಬಸ್ಸುಗಳು ಮತ್ತು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರನ್ನು ತಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣಿಸಲು ಅನುಮತಿಸಲಾಗಿರುವುದರಿಂದ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ವಲಸೆ ಕಾರ್ಮಿಕರು ರಸ್ತೆ ಮತ್ತು ರೈಲ್ವೆ ಹಳಿಗಳಲ್ಲಿ ನಡೆಯುವುದನ್ನು ಆಶ್ರಯಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಹೀಗೆ ಯಾರದರೂ ನಡೆದುಕೊಂಡು ಹೋಗುವುದು ಕಂಡುಬಂದಲ್ಲಿ, ಅವರಿಗೆ ಸೂಕ್ತ ಸಲಹೆ ನೀಡಬೇಕು. ಅವರಿಗೆ ಹತ್ತಿರದಲ್ಲಿಯೇ ಆಶ್ರಯ ನೀಡಿ, ಆಹಾರ ಇನ್ನಿತರ ವ್ಯವಸ್ಥೆ ಮಾಡಿಕೊಡಬೇಕೆಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.