ನವದೆಹಲಿ: ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವ ಮೂಲಕ ಸಾಕಷ್ಟು ರಕ್ತದ ಸಂಗ್ರಹವನ್ನು ಇಟ್ಟುಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮಂಗಳವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ (ಐಆರ್ಸಿಎಸ್) ಸೂಚಿಸಿದ್ದಾರೆ.
ರಕ್ತದಾನ ಮಾಡುವ ದಾನಿಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಒದಗಿಸಬೇಕು. ಅಥವಾ ರಕ್ತದಾನಕ್ಕೆ ಸಹಕಾರಿಯಾಗುವ ವ್ಯಾನ್‌ಗಳನ್ನು ನಿಯಮಿತ ರಕ್ತದಾನಿಗಳ ಆವರಣಕ್ಕೆ ಕಳುಹಿಸಿ ರಕ್ತ ಸಂಗ್ರಹಣೆ ಮಾಡಬೇಕು ಎಂದು ಸಚಿವರು ಐಆರ್‌ಸಿಎಸ್‌ಗೆ ಸೂಚಿಸಿದರು. ಜೊತೆಗೆ, ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸಲು ಕೇಂದ್ರ ಸಚಿವರು ರಾಜ್ಯ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ವಿಡಿಯೋ ಸಂವಹನದ ಮೂಲಕ ಭಾರತದಾದ್ಯಂತದ ಐಆರ್‌ಸಿಎಸ್ ಸದಸ್ಯರೊಂದಿಗೆ ಸಂವಹನ ನಡೆಸಿದ ವರ್ಧನ್, ಈ ಹಿಂದೆ ಕೋವಿಡ್-19 ಮಾದರಿಗಳನ್ನು ಪರೀಕ್ಷೆಗೆಂದು ಯುಎಸ್‌ಗೆ ಕಳುಹಿಸಲಾಗುತ್ತಿತ್ತು. ಆನಂತರ ಫಲಿತಾಂಶಗಳಿಗಾಗಿ ಸಾಕಷ್ಟು ಸಮಯ ಕಾಯಬೇಕಾಗುತ್ತಿತ್ತು. ಆದರೆ, ಈಗ ಭಾರತವು ಮಾದರಿಗಳನ್ನು ಪರೀಕ್ಷಿಸಲು ಸುಮಾರು 200 ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಿದೆ.
"ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯು ಕೈಜೋಡಿಸಿ ಹೆಚ್ಚಿನ ಕೊಡುಗೆ ನೀಡಿದ್ದು, ಅದನ್ನು ನಾನು ಗೌರವಿಸುತ್ತೇನೆ. ವಾಸ್ತವವಾಗಿ ಆಸ್ಪತ್ರೆಗಳಿಗೆ ಉಪಕರಣಗಳು, ಸ್ಯಾನಿಟೈಸರ್ಗಳು, ಆಹಾರ, ಪಿಪಿಇ ಕಿಟ್‌ಗಳು ಮತ್ತು ಎನ್ 95 ಮುಖವಾಡಗಳನ್ನು ಒದಗಿಸಲು ಶ್ರಮಿಸಿರುವ ಸೊಸೈಟಿಯ ಕೊಡುಗೆ ಪ್ರಶಂಸನೀಯವಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.